ಕುಶಾಲನಗರ ತಾಲೂಕಿನ ಐವರು ಕೃಷಿಕರಿಗೆ ನೇಗಿಲಯೋಗಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಜಿಲ್ಲೆ

ಕೃಷಿ ನಂಬಿ ಯಾರೂ ಸೋತಿಲ್ಲ

ಸುಂಟಿಕೊಪ್ಪ: ಸಮಾಜದ 4ನೇ ಅಂಗ ಎನ್ನಿಸಿಕೊಂಡಿರುವ ಪತ್ರಿಕಾರಂಗ ಕೂಡ ನಾನಾ ಕಾರಣಗಳಿಂದ ಕಾವಲು ಹಾದಿಯಲ್ಲಿದೆ. ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಂಡು ಎಚ್ಚೆತುಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಅಭಿಪ್ರಾಯಪಟ್ಟರು.

ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಶನಿವಾರ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನೇಗಿಲಯೋಗಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕಾರಂಗ ವೃತ್ತಿ ಧರ್ಮ ವಸ್ತುನಿಷ್ಠ ಮತ್ತು ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು. ಜತೆಗೆ ಧ್ವನಿ ಇಲ್ಲದವರ, ದುರ್ಬಲರ ಧ್ವನಿಯಾಗಬೇಕು. ಸಮಾಜದಲ್ಲಿ ಯುವಜನತೆಯ ಪಾತ್ರ ಬಹುಮುಖ್ಯವಾಗಿದ್ದು, ಅವರು ಸೃಜನಾತ್ಮಕ, ರಚನಾತ್ಮಕ ಹಾಗೂ ಸಮಾಜಮುಖಿಯಾಗಿ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪತ್ರಿಕಾರಂಗದ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಿದರು.

ರೈತರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ನಿಟ್ಟಿನಲ್ಲಿ ತಮ್ಮ ತಂದೆ-ತಾಯಿ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡಿರುವ ಕಂಬಿಬಾಣೆಯ ಕಾಫಿ ಬೆಳೆಗಾರರಾದ ಟಿ.ಕೆ.ಸಾಯಿಕುಮಾರ್ ಮಾತನಾಡಿ, ರೈತರಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಾರ್ಗದರ್ಶನ ದೊರೆಯದಿರುವುದು ಬೇಸರದ ಸಂಗತಿ. ರೈತರು ಮತ್ತು ಕಾಫಿ ಬೆಳೆಗಾರರು ಕಾಡಾನೆಗಳ ಕಾಟದಿಂದ ಹೈರಾಣಾಗಿದ್ದು, ಸರ್ಕಾರದಿಂದ ಯಾವುದೇ ಕಾರ್ಯಕ್ರಮಗಳಿಲ್ಲ. ಜತೆಗೆ ಕನಿಷ್ಠ ಸಾಂತ್ವನಗಳು ಇಲ್ಲ ಎಂದರು.

ಸುಂಟಿಕೊಪ್ಪ 1 ಗ್ರೇಡ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಪಿಡಿಒ ಜಿ.ಲೋಕೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮರಳೀಧರ್ ಮತ್ತು ಗುಡ್ಡೆಹೊಸೂರು ಗ್ರಾಪಂ ಸದಸ್ಯ ಮತ್ತು ಉದ್ಯಮಿ ಕೆ.ಆರ್.ನಿತ್ಯಾನಂದ ಮಾತನಾಡಿದರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಎಂ.ಭೂತನಕಾಡು ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ಪ್ರದಾನ: ಅರಶಿನಗುಪ್ಪೆ ಗ್ರಾಮದ ಬೆಣ್ಣೆ ಹಣ್ಣು ಶುಂಠಿ ಬೆಳೆಗಾರರಾದ ಎಂ.ಟಿ.ಬೇಬಿ, ಹೈನುಗಾರಿಕೆಯಲ್ಲಿ ಗುಡ್ಡೆಹೊಸೂರಿನ ಸಾಗರ್, ಸಮಗ್ರ ಕೃಷಿ ಸಾಧಕ ನಾಕೂರು ಶಿರಂಗಾಲದ ಪಿ.ಎಂ.ಬಿಜು, ಗುಡ್ಡೆಹೊಸೂರಿನ ನಿವಾಸಿ ಕೃಷಿಯಲ್ಲಿ ಸಾಧನೆ ಮಾಡಿದ ಮಹಿಳೆ ವಸಂತಿ ಪೊನ್ನಪ್ಪ, ಅತ್ತೂರು ಗ್ರಾಮ ಯುವ ಕೃಷಿಕ ಎಂ.ಸಜಿತ್ ಅವರಿಗೆ ನೇಗಿಲಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎರಡು ದತ್ತಿ ಪ್ರಶಸ್ತಿ ಘೋಷಣೆ: ಕಂಬಿಬಾಣೆಯ ಕಾಫಿ ಬೆಳೆಗಾರ ಟಿ.ಕೆ. ಸಾಯಿ ಕುಮಾರ್ ಅವರು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಲ್ಲಿ ಅತ್ಯುತ್ತಮ ಅವಿಭಕ್ತ ಕುಟುಂಬಗಳಿಗೆ ಗೌರವಿಸಲು 25,000 ರ. ಮೊತ್ತದ ದತ್ತಿ ನಿಧಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಗುಡ್ಡೆಹೊಸೂರುವಿನ ಮಹಿಳಾ ಕೃಷಿಕರಾದ ಕೊರವಂಡ ವಸಂತಿ ಪೊನ್ನಪ್ಪ ಕೂಡ 25,000 ರೂ. ಮೊತ್ತದ ದತ್ತಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು.