2,947 ವಿದ್ಯಾರ್ಥಿಗಳು ನೋಂದಣಿ
2,834 ಮಕ್ಕಳು ಹಾಜರು
113 ಮಕ್ಕಳು ಎಕ್ಸಾಂಗೆ ಗೈರು
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ಉಡುಪಿ ಜಿಲ್ಲೆಯ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಯುಜಿ-2025 ಪರೀಕ್ಷೆ ಮೇ 4ರಂದು ನಡೆಯಿತು. ಪರೀಕ್ಷೆಗೆ ಒಟ್ಟು 2,947 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, 2,834 ಮಂದಿ ಪರೀಕ್ಷೆ ಬರೆದರು. ಒಟ್ಟು 113 ವಿದ್ಯಾರ್ಥಿಗಳು ಗೈರಾಗಿದ್ದರು.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರ ವರೆಗೆ ಪರೀಕ್ಷಾ ಸಮಯ ನಿಗದಿ ಮಾಡಿದ್ದರಿಂದ ಅಭ್ಯರ್ಥಿಗಳು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30ರ ಒಳಗಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸೂಚನೆ ನೀಡಲಾಗಿತ್ತು.
ವಿದ್ಯಾರ್ಥಿಗಳ ತಪಾಸಣೆ
ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಸೆಂಟರ್ಗಳ ಗೇಟ್ನಲ್ಲಿಯೇ ತಡೆದು ತಪಾಸಣೆ ನಡೆಸಿ ಒಳಬಿಡಲಾಯಿತು. ಕಾಲೇಜಿನ ಒಳಗೆ ಎಲ್ಲರ ಬಯೋಮೆಟ್ರಿಕ್ ಹಾಗೂ ಹಾಲ್ ಟಿಕೆಟ್ಗಳನ್ನು ಪರಿಶೀಲಿಸಿದ ಬಳಿಕವೇ ಎಕ್ಸಾಂ ಹಾಲ್ಗೆ ತೆರಳಲು ಅವಕಾಶ ಕೊಡಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಎಂಟು ಸೆಂಟರ್ಗಳು
ವಿವೇಕ ಪಿಯು ಕಾಲೇಜು ಕೋಟದಲ್ಲಿ 480 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು 461 ಮಂದಿ ಹಾಜರಾಗಿದ್ದರು. ಎಂಜಿಎಂ ಪಿಯು ಕಾಲೇಜು ಉಡುಪಿಯಲ್ಲಿ 648ರಲ್ಲಿ 624, ಡಾ. ಜಿ.ಶಂಕರ ಕಾಲೇಜು ಉಡುಪಿ 528ರಲ್ಲಿ 508, ಸರ್ಕಾರಿ ಪಿಯು ಕಾಲೇಜು (ಬಾಲಕಿಯರ) ಹೈಸ್ಕೂಲ್ ವಿಭಾಗ ಉಡುಪಿ 264ರಲ್ಲಿ 253, ಸರ್ಕಾರಿ ಪ್ರಿ&ಯುನಿವರ್ಸಿಟಿ ಕಾಲೇಜು ಬ್ರಹ್ಮಾವರ 240ರಲ್ಲಿ 228, ಸರ್ಕಾರಿ ಪಿಯು ಕಾಲೇಜು (ಬಾಲಕಿಯರ) ಉಡುಪಿ 240ರಲ್ಲಿ 235, ಸರ್ಕಾರಿ ಪಿಯು ಬೋರ್ಡ್ ಉಡುಪಿ 384ರಲ್ಲಿ 369 ಹಾಗೂ ಸರ್ಕಾರಿ ಕಾಂಪೋಸಿಟ್ ಹೈಸ್ಕೂಲ್ ವೊಳಕಾಡು ಉಡುಪಿಯಲ್ಲಿ 163 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು 156 ಮಂದಿ ಹಾಜರಾಗಿದ್ದರು.
ಪರೀಕ್ಷೆ ಶಾಂತಿಯುತ
ಯಾವ ಸೆಂಟರ್ನಲ್ಲೂ ಸಹ ಯಾವುದೇ ರೀತಿಯ ನಕಲು, ವಿದ್ಯಾರ್ಥಿಗಳ ಡಿಬಾರ್ ನಡೆಯದೆ ಅತ್ಯಂತ ವ್ಯವಸ್ಥಿತವಾಗಿ ಶಾಂತಿಯುತವಾಗಿ ನೀಟ್ ಪರೀಕ್ಷೆ ನಡೆದಿದೆ. ಅಂಗವಿಕಲರಿಗೆ ಪರೀಕ್ಷೆ ಬರೆಯಲು ಒಂದು ಗಂಟೆ ಹೆಚ್ಚು ಕಾಲಾವಕಾಶ ನೀಡಲಾಗಿತ್ತು ಎಂದು ಜಿಲ್ಲಾ ನೀಟ್ ಪರೀಕ್ಷೆಯ ಸಂಯೋಜಕ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎನ್.ಕರೀಂ ಖಾನ್ ವಿಜಯವಾಣಿಗೆ ತಿಳಿಸಿದ್ದಾರೆ.