ಮಂಗಳೂರು: ನೀರುಮಾರ್ಗ ಶಾಂತಿಗುರಿ ಕೊರ‌್ದಬ್ಬು, ತನ್ನಿಮಾನಿಗ, ರಾಹುಗುಳಿಗ ದೈವಸ್ಥಾನಕ್ಕೆ ಶನಿವಾರ ತಡರಾತ್ರಿ ನುಗ್ಗಿದ ಕಳ್ಳರು ಮೂರು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 15 ಸಾವಿರ ರೂ. ನಗದು ಕಳವುಗೈದಿದ್ದಾರೆ.
ಶನಿವಾರ ರಾತ್ರಿ 7ಗಂಟೆ ಸುಮಾರಿಗೆ ದೈವಸ್ಥಾನದ ಚಾಕರಿಯವರು ದೀಪವಿಟ್ಟು ಬಾಗಿಲು ಹಾಕಿ ಹೋಗಿದ್ದರು. ಭಾನುವಾರ ಬೆಳಗ್ಗೆ ಬಂದು ನೋಡುವಾಗ ಕಳವು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಮುಖ್ಯ ರಸ್ತೆ ಬದಿಯಲ್ಲಿದ್ದ ಕಾಣಿಕೆ ಡಬ್ಬಿ ಹಾಗೂ ದೈವಸ್ಥಾನದ ಹೊರಗಡೆಯಿದ್ದ ಕಾಣಿಕೆ ಡಬ್ಬಿಯನ್ನು ಕಳವುಗೈದಿದ್ದಾರೆ. ಬಳಿಕ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ದೈವಸ್ಥಾನದ ಒಳಗಿದ್ದ ಕಾಣಿಕೆ ಡಬ್ಬಿಯ ಬೀಗ ಮುರಿದು ನಗದು ಕಳವುಗೈದಿದ್ದಾರೆ.
ಚಿನ್ನ ಬೆಳ್ಳಿ ಬಿಟ್ಟು ಹೋದರು: ದೈವಸ್ಥಾನದ ಮೂರು ಕಾಣಿಕೆ ಡಬ್ಬಿಗಳನ್ನು ಕಳವುಗೈದ ಕಳ್ಳರು ದೈವಸ್ಥಾನದ ಒಳಗಿದ್ದ 7 ಪವನ್ ಚಿನ್ನದ ನಾಲಗೆ, ಬೆಳ್ಳಿಯ ಸೊತ್ತುಗಳು, ಮೊಗ ಸೇರಿದಂತೆ ಇತರ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ.
ಕೆಟ್ಟುಹೋದ ಸಿಸಿ ಕ್ಯಾಮೆರಾ: ದೈವಸ್ಥಾನದಲ್ಲಿ ಹಾಕಲಾದ ಸಿಸಿ ಕ್ಯಾಮೆರಾ ಕೆಟ್ಟು ಹೋಗಿದ್ದು, ಕಳವು ಕೃತ್ಯ ಯಾವುದೇ ಚಹರೆ ದಾಖಲಾಗಿಲ್ಲ. ಇದೇ ರಸ್ತೆಯ ಬಂಡಸಾಲೆ, ಒಳಬೈಲು ಸಮೀಪ ಎರಡು ಸಿಸಿ ಕ್ಯಾಮೆರಾವನ್ನು ಪರಿಶೀಲಿಸಲಾಗುತ್ತಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.