ಜಿಲ್ಲೆ

ರಸ್ತೆ ಬದಿ ಎಸೆದ ಕಸದ ರಾಶಿಯಲ್ಲಿ ದೊರೆತಸುಳಿವು ಆಧರಿಸಿ ತಪ್ಪಿತಸ್ಥರಿಂದ ದಂಡ ವಸೂಲಿ

Mangaluru - Prakash MC Manjeshwar

ಮಂಗಳೂರು: ರಸ್ತೆ ಬದಿ ಎಸೆದ ಕಸದ ಮೂಟೆಯಲ್ಲಿ ಪತ್ತೆಯಾದ ಬಿಲ್‌ಗಳನ್ನು ಆಧರಿಸಿ ದೊರೆತ ಸುಳಿವಿನಿಂದ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆದ ತಪ್ಪಿತಸ್ಥರಿಗೆ ದಂಡ ವಿಧಿಸುವ ಮೂಲಕ ನೀರುಮಾರ್ಗ ಗ್ರಾಮ ಪಂಚಾಯಿತಿ ಗಮನ ಸೆಳೆದಿದೆ.
ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ಸ್ವಚ್ಚತಾ ಕಾರ್ಯ ಆಯೋಜಿಸಿದ ಸಂದರ್ಭ ರಸ್ತೆ ಬದಿ ಎಸೆದ ಕಸದ ಮೂಟೆಯಲ್ಲಿ ಕೆಲವೊಂದು ಬಿಲ್‌ಗಳು ಹಾಗೂ ಆನ್‌ಲೈನ್ ನಿಂದ ಖರೀದಿಸಿದ ವಸ್ತುಗಳ ಕವರ್‌ಗಳು ದೊರೆತ್ತಿವೆ. ಅದರಲ್ಲಿ ದೊರೆತ ವಿಳಾಸವನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯಿತಿ ತಂಡ ಆರೋಪಿಗಳಿಂದ ರೂ. 5000 ದಂಡ ವಸೂಲಿ ಮಾಡಿದೆ.
ನೀರುಮಾರ್ಗ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸಂಗ್ರಹಿಸಿ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದಬೃಹತ್ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಯಿತು.
 ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸಿ ಅಪ್ಪಣ್ಣ, ಸಹಾಯಕ ನಿರ್ದೇಶಕ ಮಹೇಶ್ ಅಂಬೇಕಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್, ಕಾರ್ಯದರ್ಶಿ ಮತ್ತು  ಸಿಬ್ಬಂದಿ, ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.