ಜಿಲ್ಲೆ

ಝೆನ್​ ಟೀಮ್​ಗೆ 20 ತುಂಬಿದ ಸಂಭ್ರಮ 2 ದಿನಗಳ ನೀನಾಸಂ ನಾಟಕೋತ್ಸವ

ತುಮಕೂರು: ತುಮಕೂರಿನ ಝೆನ್​ ಟೀಮ್​ ಗೆ 20 ವರ್ಷ ತುಂಬಿದ ಸಂಭ್ರಮದ ಹಿನ್ನೆಲೆಯಲ್ಲಿ 2 ದಿನಗಳ ನೀನಾಸಂ ನಾಟಕೋತ್ಸವವನ್ನು ನಗರದ ಬಾಲಭವನದಲ್ಲಿ ಆಯೋಜಿಸಲಾಗಿತ್ತು. ಮೊದಲ ದಿನವಾದ ಶುಕ್ರವಾರ ಮಾಲತೀ&ಮಾಧವ ನಾಟಕ ಪ್ರದರ್ಶನಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಕೈಗಾರಿಕೋದ್ಯಮಿ ಎಚ್​.ಜಿ.ಚಂದ್ರಶೇಖರ್​. ವೈಚಾರಿಕ ನಾಟಕಗಳು ಹಾಗೂ ಪ್ರಯೋಗಾತ್ಮಕ ನಾಟಕಗಳ ಪ್ರದರ್ಶನದ ಅಗತ್ಯವಿದೆ. ಕೆ.ವಿ.ಸುಬ್ಬಣ್ಣನವರು ಹೆಚ್ಚು ಹೆಚ್ಚು ವೈಚಾರಿಕ ಹಾಗೂ ಪ್ರಯೋಗಾತ್ಮಕ ನಾಟಕಗಳನ್ನು ಸಜ್ಜುಗೊಳಿಸಿದವರಲ್ಲಿ ಪ್ರಮುಖರು ಎಂದರು.

ಮಲೆನಾಡಿನ ಒಂದು ಪುಟ್ಟ ಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಪ್ರಯೋಗಾತ್ಮಕ ನಾಟಕಗಳನ್ನು ಕರುನಾಡಿಗೆ ಪರಿಚಯಿಸಿದ ಕೀರ್ತಿ ಸುಬ್ಬಣ್ಣನವರದ್ದು. ನೀನಾಸಂ ತಿರುಗಾಟಕ್ಕೆ ಈಗ ಸಾರ್ಥಕ 75 ವರ್ಷ. ಪ್ರಸಿದ್ಧ ರಂಗನಿರ್ದೇಶಕ ಬಿ.ವಿ. ಕಾರಂತ್​ ಸೇರಿದಂತೆ ಹಲವು ಪ್ರಮುಖ ನಿರ್ದೇಶಕರನ್ನು ಕರೆಸಿ ನಾಟಕವನ್ನು ಪ್ರದರ್ಶಿಸಿದ ಕೀರ್ತಿ ಸುಬ್ಬಣ್ಣನವರದ್ದು. ಕೆ.ವಿ. ಸುಬ್ಬಣ್ಣರನ್ನು ನೆನಪಿಸಿಕೊಳ್ಳುವ ಹಾಗೆ ನಮ್ಮ ತುಮಕೂರು ಗುಬ್ಬಿ ವೀರಣ್ಣರನ್ನು ನೆನಪಿಸಿಕೊಳ್ಳಬೇಕು. ಇವರಿಬ್ಬರು ರಂಗ ದಿಗ್ಗಜರು.ಗುಬ್ಬಿ ವೀರಣ್ಣ ಗರಡಿಯಲ್ಲಿ ಪಳಗಿದ ಬಹಳಷ್ಟು ನಟರು ಪ್ರಸ್ತುತ ಚಿತ್ರರಂಗದಲ್ಲಿ ಪ್ರಸಿದ್ಧಿ ಹೊಂದಿದ್ದಾರೆ ಎಂದರು.

ರಂಗಭೂಮಿಗೆ ಜನರ ಆಲೋಚನಾ ಕ್ರಮವನ್ನು ಬದಲಾಯಿಸುವ ಶಕ್ತಿ ಇದೆ ಎಂದರು. ಎಲ್ಲಾ ಕಲೆಗಳನ್ನು ಒಳಗೊಂಡಿರುವ ರಂಗಭೂಮಿ ಮೂಲಕ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿ ಎಂದು ನಟ ಹನುಮಂತೇಗೌಡ ಆಶಯ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನಕುಮಾರ್​ ಮಾತನಾಡಿ ಟಿವಿ ಸೀರಿಯಲ್​, ಮೊಬೈಲ್​ ಅಬ್ಬರಗಳ ನಡುವೆಯೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿರುವುದು ಖುಷಿಯ ಸಂಗತಿ. ನಾಟಕ ಕಲೆ ಎಂಬುದು ಅತ್ಯುನ್ನತವಾದದ್ದು. ಅಭಿನಯದ ಮೂಲಕ ಸಮಸ್ತ ಲೋಕವನ್ನು ಕಾಣಿಸುವ ಶಕ್ತಿ ರಂಗಭೂಮಿಗೆ ಇದೆ. ತುಮಕೂರಿನಲ್ಲಿ ಹೊಸ ಅಲೆಯ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನಗೊಳ್ಳಲಿ ಆ ಮೂಲಕ ರಂಗಭೂಮಿಯಲ್ಲಿ ತುಮಕೂರಿಗೆ ವಿಶ್ವ ಮಾನ್ಯತೆ ಸಿಗುವಂತಾಗಲಿ ಎಂದರು.

ಝೆನ್​ ಟೀಮ್​ ಮುಖ್ಯಸ್ಥ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್​ ಮಾತನಾಡಿ 20 ವರ್ಷಗಳ ಝೆನ್​ ಟೀಮ್​ ಪಯಣದಲ್ಲಿ ತುಮಕೂರಿನ ಪ್ರೇಕ್ಷಕರು ಹುರಿದುಂಬಿಸಿದ್ದಾರೆ. ಅವರಿಗೆಲ್ಲಾ ಅಭಾರಿಯಾಗಿದ್ದೆನೆ ಎಂದರು. ಬಳಿಕ ಭವಭೂತಿ ರಚಿಸಿರುವ ಮಾಲತೀ ಮಾಧವ ನಾಟಕ ಪ್ರದರ್ಶನಗೊಂಡಿತು.