ಜಿಲ್ಲೆ

ಬೇವಿನೆಣ್ಣೆ, ಕೊಬ್ಬರಿ ಎಣ್ಣೆ ಲೇಪನದಿಂದ ಸೊಳ್ಳೆ ಕಡಿತಕ್ಕೆ ಮುಕ್ತಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಪ್ರಕಾರ ಬೇವಿನ ಎಣ್ಣೆ ಜೊತೆಗೆ ಕೊಬ್ಬರಿ ಎಣ್ಣೆ ಸೇರಿಸಿ ಕೈ, ಕಾಲು ಮತ್ತು ದೇಹಕ್ಕೆ ಹಚ್ಚುವುದರಿಂದ ಡೆಂಘೆ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಆಪ್ ಸೆವೆನ್ ಹಿಲ್ಸ್ ಮತ್ತು ದೃಷ್ಟಿ ನರ್ಸಿಂಗ್ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡೆಂಘೆ ಜಾಗೃತಿ ಜಾಥಾ ಹಾಗೂ ರೋಟರಿ ಕ್ಲಬ್ ಆಪ್ ಸೆವೆನ್ ಹಿಲ್ಸ್ ನೀಡಿದ ನೀಮ್ ಆಯಿಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡೆಂಘೆ ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ನೀಮ್ ಆಯಿಲ್ ಹಚ್ಚಿಕೊಳ್ಳಲು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಇದರೊಂದಿಗೆ ಲಾರ್ವಾ ನಾಶ, ಸ್ವಚ್ಛತಾ ಅಭಿಯಾನ, ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಎಲ್ಲರೂ ಕೈ, ಕಾಲು ಮುಚ್ಚುವಂತೆ ಬಟ್ಟೆ ಧರಿಸಬೇಕು. ಮನೆ ಆವರಣದಲ್ಲಿ ನೀರು ಸಂಗ್ರಹಿಸುವ ಟ್ಯಾಂಕ್, ಸಿಂಟೆಕ್ಸ್ಗಳಲ್ಲಿ ಗಪ್ಪಿ ಮೀನುಗಳನ್ನು ಬಿಡುವ ಮೂಲಕ ಡೆಂಘೆ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಬೇಕು ಎಂದರು.
ಇದೇವೇಳೆ ಮಾಳಾಪುರದ ಕೆಲ ನಿವಾಸಿಗಳ ಬಾವಿಗೆ ಗಪ್ಪಿ ಮೀನುಗಳನ್ನು ಬಿಡಲಾಯಿತು. ಸಾರ್ವಜನಿಕರಿಗೆ ನೀಮ್ ಆಯಿಲ್ ವಿತರಿಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ. ಸುಜಾತಾ ಹಸವಿಮಠ, ಪಾಲಿಕೆ ಸದಸ್ಯ ರಾಜಶೇಖರ ಕಮತಿ, ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಅಧ್ಯಕ್ಷೆ ಗೌರಿ ಮಾಧನಬಾವಿ, ಕಾರ್ಯದರ್ಶಿ ಸ್ಮಿತಾ ಮಂತ್ರಿ ಹಾಗೂ ಸದಸ್ಯರು, ದೃಷ್ಟಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.