ಮಾಯಕೊಂಡ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಹಲವು ಸೌಲಭ್ಯ ಸಿಗಲಿವೆ. ಹೀಗಾಗಿ ಇಲ್ಲಿಗೆ ಮಕ್ಕಳನ್ನು ದಾಖಲಿಸಿ ಈ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಪಾಲಕರು ಹಾಗೂ ಗ್ರಾಮಸ್ಥರ ಕರ್ತವ್ಯವಾಗಿದೆ ಎಂದು ನಿವೃತ್ತ ಹಿರಿಯ ಶಿಕ್ಷಕ ನೀಲಕಂಠಯ್ಯ ಹೇಳಿದರು.
ದಾವಣಗೆರೆ ತಾಲೂಕು ಅಣಜಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಶಾಲೆಗಳ ಹಾವಳಿ ಹೆಚ್ಚಿದೆ. ಬಡ ಮಕ್ಕಳಿಗೆ ಆಧಾರ ಸ್ತಂಭವಾಗಿದ್ದ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಹಿನ್ನೆಲೆಯಲ್ಲಿ ಅವನತಿ ಅಂಚಿನಲ್ಲಿವೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಬೇಕು ಎಂದರು.
ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿರುವ ಪಾಲಕರು ತಾವು ಓದಿರುವ ಶಾಲೆಗಳತ್ತ ಒಮ್ಮೆ ಹಿಂತಿರುಗಿ ನೋಡಿ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಶಂಕರನಾಯ್್ಕ ಮಾತನಾಡಿ, ಸರ್ಕಾರಿ ಶಾಲೆಗಳು ಶಿಕ್ಷಣದೊಂದಿಗೆ ಶಿಸ್ತು, ಸೌಜನ್ಯ, ಸಾಮಾಜಿಕ ಪರಿಪಾಠವನ್ನು ಕಲಿಸುತ್ತವೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಅಣಜಿ ಮಾತನಾಡಿದರು.
40 ವರ್ಷ ಹಿಂದಿನ ನಿವೃತ್ತ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿ ಬಳಗದಿಂದ ಸನ್ಮಾನಿಸಲಾಯಿತು. ಹರಳಹಳ್ಳಿ ಕೊಟ್ರಬಸಪ್ಪ ಟ್ರಸ್ಟಿ ಮಂಜುನಾಥ್ ಹಾಗೂ ನಾಗರತ್ನಾ ದಂಪತಿ 2 ಲಕ್ಷ ರೂ. ವೆಚ್ಚದಲ್ಲಿ 22 ಡೆಸ್ಕ್ಗಳನ್ನು ಶಾಲೆಗೆ ದೇಣಿಗೆ ನೀಡಿದರು.
ಮುಖ್ಯ ಶಿಕ್ಷಕ ಎಸ್. ಹನುಮಂತಪ್ಪ ಸ್ವಾಗತಿಸಿದರು. ಶಿಕ್ಷಕಿ ಆಶಾ ನಿರೂಪಿಸಿದರು.
ಗ್ರಾಪಂ ಅಧ್ಯಕ್ಷ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಕರಿಬಸಪ್ಪ, ನಿವೃತ್ತ ಶಿಕ್ಷಕಿ ಕೌಸಲ್ಯಾಬಾಯಿ, ಗ್ರಾಮಸ್ಥರು ಪಾಲಕರು ಹಾಗೂ ಹಳೆಯ ವಿದ್ಯಾರ್ಥಿಗಳಿದ್ದರು.