ಭಾಗ್ಯವಾನ್ ಸನಿಲ್ ಮೂಲ್ಕಿ
ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಜನ ವಾಸಿಸುವ ಕೆ.ಎಸ್ ರಾವ್ ನಗರದ ಕುಡಿಯುವ ನೀರಿನ ಸಂಗ್ರಹದ ಟ್ಯಾಂಕ್‌ಗೆ ರಕ್ಷಣೆಯಿಲ್ಲದೆ ಭೀತಿ ಎದುರಾಗಿದೆ. ಕೆ.ಎಸ್.ರಾವ್ ನಗರದ ವಿಜಯಪುರ ಕಾಲನಿಯ ನಾಗಬನ ಸಮೀಪ ನಿರ್ಮಿಸಿರುವ ನೀರಿನ ಟ್ಯಾಂಕ್ ಹತ್ತಿರವೇ ತ್ಯಾಜ್ಯ ಎಸೆಯುವ ಪ್ರದೇಶವಿದ್ದು, ಯಾರಾದರೂ ಕಸ ಬೀಸಿ ಒಗೆದರೆ ಅದು ಟ್ಯಾಂಕ್ ಮೇಲೆ ಬೀಳುವ ಭೀತಿಯಿದೆ.
ಕಿಡಿಗೇಡಿಗಳ ಕಾಟ: ಈ ಪ್ರದೇಶದಲ್ಲಿ ಕೆಲವು ಅಲೆಮಾರಿ ಯುವಕರು ರಾತ್ರಿ ಪಂಪ್ ಹತ್ತಿ ಕುಳಿತು ಅಮಲು ದ್ರವ್ಯ ಸೇವಿಸುವುದು, ತಡರಾತ್ರಿವರೆಗೂ ಸುಖಾಸುಮ್ಮನೆ ಸಮಯ ಕಳೆಯುವುದು ಕಂಡುಬರುತ್ತಿದೆ. ಇಲ್ಲಿನ ಟ್ಯಾಂಕ್‌ಗೆ ಸರಿಯಾದ ಬಾಗಿಲೇ ಇಲ್ಲ. ಟ್ಯಾಂಕ್ ಒಳಗೆ ಇಳಿಯಬಿಟ್ಟಿರುವ ಕಬ್ಬಿಣದ ಏಣಿ ತಡೆಯುವ ಕಾರಣ ಬಾಗಿಲು ಹಾಕಲಾಗುತ್ತಿಲ್ಲ. ಈ ನಡುವೆ ಪಕ್ಷಿಗಳೇನಾದರೂ ಅಪಾಯಕಾರಿ ವಸ್ತುಗಳನ್ನು ನೀರಿಗೆ ಹಾಕಿದರೂ ಗಮನ ಹರಿಸುವವರಿಲ್ಲ. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ನೀರು ವಿಷಮಯಗೊಳಿಸುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ದೂರಿದ್ದಾರೆ. ಪಂಚಾಯಿತಿ ಕಬ್ಬಿಣದ ಏಣಿ ದಿನದ 24 ಗಂಟೆಯೂ ನೀರಿನಲ್ಲಿರುವ ಕಾರಣ ಏಣಿಯ ಕಿಲುಬು ನೀರಿಗೆ ಬೀಳುವ ಸಾಧ್ಯತೆಯಿದ್ದು, ಏಣಿ ತೆಗೆಯುವ ವ್ಯವಸ್ಥೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪೊಲೀಸರು ಸಾಯಂಕಾಲ, ರಾತ್ರಿ ವೇಳೆ ಈ ಪ್ರದೇಶದಲ್ಲಿ ಪ್ರತಿನಿತ್ಯ ಬೀಟ್ ನಡೆಸಿದರೆ ಕಿಡಿಗೇಡಿ ಕೃತ್ಯ ನಿಲ್ಲಿಸಲು ಸಾಧ್ಯ. ಪಂಚಾಯಿತಿ ಆಡಳಿತ ಈ ಬಗ್ಗೆ ಗಮನ ಹರಿಸಬೇಕು. ಟ್ಯಾಂಕ್ ಸುತ್ತ ಗೋಡೆ ನಿರ್ಮಿಸಿ ಕಸ ಬೀಳದಂತೆ, ಜನರು ಪ್ರವೇಶಿಸದಂತೆ ನಿರ್ಬಂಧಿಸಬೇಕು. ಟ್ಯಾಂಕ್ ಬಾಗಿಲು ಸರಿಪಡಿಸಿ ಸೂಕ್ತ ಬೀಗ ಅಳವಡಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ಟ್ಯಾಂಕ್ ಪರಿಸರ ಅವ್ಯವಸ್ಥೆ ಬಗ್ಗೆ ನಗರ ಪಂಚಾಯಿತಿಯ ಗಮನ ಸೆಳೆದಿದ್ದರೂ ಕ್ರಮ ಕೈಗೊಂಡಿಲ್ಲ. ಲಿಂಗಪ್ಪಯ್ಯಕಾಡಿಗೆ ನೀರುಣಿಸುವ ಟ್ಯಾಂಕ್ ಪರಿಸರ ಹಾಗೂ ಪಂಚಾಯಿತಿಯಿಂದ ನಿರ್ಮಿಸಲ್ಪಟ್ಟ ಮಕ್ಕಳ ಬಾಲವನ ಅವ್ಯವಸ್ಥೆಯಿಂದಿದ್ದು ಈ ಬಗ್ಗೆ ಗಮನ ಹರಿಸಬೇಕು.
ನಾಗೇಶ್ ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ
ಈ ಪ್ರದೇಶದಲ್ಲಿ ಕಿಡಿಗೇಡಿಗಳ ಕಾಟ ವಿಪರೀತವಾಗಿದೆ. ಮಕ್ಕಳ ಬಾಲವನದ ಆಟಿಕೆ ವಸ್ತುಗಳನ್ನು ಮುರಿದಿರುವುದು ಗಮನಕ್ಕೆ ಬಂದಿದೆ. ಟ್ಯಾಂಕ್ ರಕ್ಷಣೆಗೆ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು.
ಲಿಲ್ಲಿ ನಾಯರ್
ಕಿರಿಯ ಆರೋಗ್ಯ ಅಧಿಕಾರಿ ಮೂಲ್ಕಿ ನಗರ ಪಂಚಾಯಿತಿ
ಸ್ಥಳೀಯರ ದೂರಿಗೆ ಸ್ಪಂದಿಸಿ ಬಲೆ ಅಳವಡಿಸಲಾಗಿದೆ. ಬಾಲವನದ ಮೇಲೆ ನಿಗಾ ವಹಿಸಲಾಗುವುದು. ಟ್ಯಾಂಕ್ ಬಾಗಿಲಿನ ಅವ್ಯವಸ್ಥೆ ಸರಿಪಡಿಸಲಾಗುವುದು.
ಚಂದ್ರ ಪೂಜಾರಿ ಮುಖ್ಯಾಧಿಕಾರಿ ಮೂಲ್ಕಿ ನಗರ ಪಂಚಾಯಿತಿ