ಜಿಲ್ಲೆ

ಹುಂಡಿ ಹಣ ಬೇಕು, ಸೌಲಭ್ಯ ಕೇಳಬೇಡಿ

ಗುಡಿಬಂಡೆ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇಗುಲದಲ್ಲಿ ಹಲವು ಬಾರಿ ಕಳವಾದರೂ ಭದ್ರತೆ ಇಲ್ಲ

ಎನ್​.ವಿ.ವೆಂಕಟೇಶ್​, ಗುಡಿಬಂಡೆ
ಇತಿಹಾಸ ಪ್ರಸಿದ್ಧ ಗುಡಿಬಂಡೆ ತಾಲೂಕಿನ ಲಕ್ಷ್ಮಿ ಆದಿನಾರಾಯಣಸ್ವಾಮಿ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಇಲ್ಲದೇ ಸುಮಾರು 5ಕ್ಕೂ ಹೆಚ್ಚು ಬಾರಿ ದೇಗುಲದ ಹುಂಡಿ ಕಳ್ಳತನವಾಗಿದೆ. ಆದರೂ ಸೂಕ್ತ ಭದ್ರತೆ ನೀಡುವಲ್ಲಿ ಮುಜರಾಯಿ ಇಲಾಖೆ ಸಂಪೂರ್ಣ ವಿಫಲರಾಗಿದೆ.
ತಾಲೂಕಿನ ಎಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿನಾರಾಯಣಸ್ವಾಮಿ ಬೆಟ್ಟದ ಬುಡದಲ್ಲಿ ನೆಲೆಸಿರುವ ಶ್ರೀ ಲ್ಮ ಆದಿನಾರಾಯಣಸ್ವಾಮಿ ದೇವಸ್ಥಾನ ನಿಸರ್ಗ ತಾಣದಲ್ಲಿದೆ. ಪ್ರತಿ ವರ್ಷ ದೇಗುಲದಲ್ಲಿ ಸುಮಾರು 15 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಇಂಥ ಸುಪ್ರಸಿದ್ಧ ಹಾಗೂ ದೈವಭಕ್ತಿ ಇರುವ ಈ ದೇವಸ್ಥಾನದಲ್ಲಿ 5ಕ್ಕೂ ಹೆಚ್ಚು ಬಾರಿ ಹುಂಡಿ ಕಳ್ಳತನವಾಗಿದೆ. ಕಳ್ಳತನವಾದಾಗ ಮಾತ್ರ ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಬಂದು ನೋಡಿಕೊಂಡು ಸೂಕ್ತ ಭದ್ರತೆ ನೀಡುವುದಾಗಿ ಭರವಸೆ ನೀಡಿ ಹೋಗುತ್ತಾರೆ. ಮತ್ತೆ ಇತ್ತ ನೋಡುವುದೇ ಇಲ್ಲ. ಪ್ರತಿ ವರ್ಷ ಜಾತ್ರೆ ನಂತರ ತಹಸೀಲ್ದಾರ್​ ಹುಂಡಿ ಬೀಗ ತೆಗೆದು ಹಣ ತೆಗೆದುಕೊಂಡು ಹೋದರೆ, ಮತ್ತೆ ಇತ್ತ ತಿರುಗಿ ನೋಡುವುದು ಮತ್ತೊಮ್ಮೆ ಹುಂಡಿ ತೆರೆಯುವಾಗ. ಅಧಿಕಾರಿಗಳಿಗೆ ದೇವಸ್ಥಾನ ಹಣ ಮಾತ್ರ ಮುಖ್ಯವಾಗಿದೆ. ಆದರೆ ದೇವಸ್ಥಾನಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು ಮುಖ್ಯವಲ್ಲ. ಇನ್ನೂ ಭದ್ರತೆಯ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿಯೇ ದೇವಾಸ್ಥಾನದಲ್ಲಿ ಹಲವು ಬಾರಿ ಹುಂಡಿ ಕಳುವಾಗಿ ಲಾಂತರ ರೂಪಾಯಿ ಕಳ್ಳರ ಪಾಲಾಗಿದೆ.
ದೇವಸ್ಥಾನಕ್ಕೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿ ಎಂದು ದೇವಸ್ಥಾನ ಕಮಿಟಿ ತಹಸೀಲ್ದಾರ್​ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನು ನಾವು ದೇವಸ್ಥಾನದ ಭದ್ರತೆಗಾಗಿ ಮೇಲಧಿಕಾರಿಗಳ ಮೊರೆಹೋಗುವುದು ಅನಿವಾರ್ಯ ಎನ್ನುತ್ತಾರೆ ದೇವಾಲಯ ಸಮಿತಿ ಸದಸ್ಯರು.

ಒತ್ತುವರಿ ತೆರವು ವಿಫಲ:
ದೇವಸ್ಥಾನದ ಹೆಸರಿನಲ್ಲಿ 700ಕ್ಕೂ ಹೆಚ್ಚು ಎಕರೆ ಆಸ್ತಿ ಇದೆ. ಈಗ ಕೇವಲ 126 ಎಕರೆ ಜಮೀನು ದೇವಸ್ಥಾನ ಹೆಸರಿನಲ್ಲಿದೆ. ಬಹುತೇಕ ಆಸ್ತಿ ಒತ್ತುವರಿ ಆಗಿದ್ದು, ಈ ಒತ್ತುವರಿ ತೆರವು ಮಾಡಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಏನು ಪ್ರಯೋಜನವಾಗಿಲ್ಲ. ಅಧಿಕಾರಿಗಳ ದಿವ್ಯ ರ್ನಿಲಕ್ಷ$್ಯದಿಂದ ದೇವಸ್ಥಾನ ಆಸ್ತಿಗಳು ಮತ್ತು ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಆದರೂ ಅಧಿಕಾರಿಗಳು ಮಾತ್ರ ಮೌನವಹಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸಿಸಿ ಕ್ಯಾಮರಾ ಅಳವಡಿಕೆಗೆ ಒತ್ತಾಯ:
ಸಮಾರು 500 ವರ್ಷದ ಇತಿಹಾಸವಿರುವ, ನಿಸರ್ಗ ನಿರ್ಮಿತ ಕೂರ್ಮಗಿರಿಯೆಂದೇ ಪ್ರಸಿದ್ಧಿ ಪಡೆದ ಎಲ್ಲೋಡು ಆದಿನಾರಾಯಣಸ್ವಾಮಿ ದೇವಸ್ಥಾನಕ್ಕೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿ ಇತರ ರಾಜ್ಯಗಳಿಂದ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಕಾಣಿಕೆಗಳನ್ನು ಸಹ ಸಲ್ಲಿಸುತ್ತಾರೆ. ಈ ಹಣಕ್ಕೆ ಸೂಕ್ತ ಭದ್ರತೆ ಇಲ್ಲದೇ ಇರುವುದರಿಂದ ಕಳವಾಗುತ್ತಿದೆ. ಕಳ್ಳತನ ತಡೆಯಲು ದೇವಸ್ಥಾನದ ಹಣದಿಂದಲೇ ದೇವಸ್ಥಾನಕ್ಕೆ ಸಿ.ಸಿ.ಕ್ಯಾಮರಾ ಅಳವಡಿಸಿ ಎಂದು ತಹಸೀಲ್ದಾರ್​ಗೆ ಮನವಿ ಮಾಡಿದರೂ, ಅಧಿಕಾರಿಗಳು ಕಿವಿಗೆ ಹಾಕಿ ಕೊಳ್ಳುತ್ತಿಲ್ಲ. ಈ ಬಗ್ಗೆ ನಾವು ಮೇಲಧಿಕಾರಿಗಳ ಗಮನಕ್ಕೆ ತಂದು ಸಿಸಿ ಟಿವಿ ಕ್ಯಾಮರಾ ಅಳವಡಿಸುವಂತೆ ಒತ್ತಾಯ ಮಾಡುವುದಾಗಿ ಕಮಿಟಿ ಸದಸ್ಯರು ಹೇಳುತ್ತಿದ್ದಾರೆ.

ಅಧಿಕಾರಿಗಳು ಲೆಕ್ಕ ಕೊಡುವುದಿಲ್ಲ:
ಪ್ರತಿ ವರ್ಷ ಜಾತ್ರೆಯಾದ ನಂತರ ಹುಂಡಿ ಎಣಿಕೆ ಮಾಡುತ್ತಾರೆ. ಸುಮಾರು 5 ಲಕ್ಕೂ ಹೆಚ್ಚು ಹಣ ಸಂಗ್ರಹವಾಗುತ್ತದೆ. ತಹಸೀಲ್ದಾರ್​ ಆ ಹಣವನ್ನು ದೇವಸ್ಥಾನದ ಖಾತೆಗೆ ಜಮಾ ಮಾಡುತ್ತಾರೆ. ಮತ್ತೆ ಹಣವನ್ನು ಯಾವುದಕ್ಕೆ ಖರ್ಚು ಮಾಡುತ್ತಾರೆ ಹಾಗೂ ದೇವಸ್ಥಾನದ ಸಿಬ್ಬಂದಿಗೆ ಎಷ್ಟು ವೇತನ ನೀಡುತ್ತಾರೆ ಹಾಗೂ ಯಾವ ಖಾತೆಯಿಂದ ನೀಡುತ್ತಾರೆಂದು ತಹಸೀಲ್ದಾರ್​ ಅವರನ್ನು ದೇಗುಲ ಸಮಿತಿಗೆ ತಿಳಿಸುತ್ತಿಲ್ಲ. ಕೇಳಿದರೂ ಉತ್ತರವೇ ಇಲ್ಲ ಎಂದು ದೇವಸ್ಥಾನ ಸಮಿತಿ ಸದಸ್ಯರು ಆರೋಪಿಸುತ್ತಿದ್ದಾರೆ.


ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ದೇವಸ್ಥಾನದ ಕಮಿಟಿ ಇದೆಯಾದರೂ ಅಧಿಕಾರಿಗಳಿಗೆ ಕಮಿಟಿ ಲೆಕ್ಕಕ್ಕೇ ಇಲ್ಲ. ದೇವಸ್ಥಾನದಲ್ಲಿ 5ಕ್ಕೂ ಹೆಚ್ಚು ಬಾರಿ ಹುಂಡಿ ಹಣ ಕಳ್ಳತನ ಆಗುತ್ತಿದೆ. ದೇವಸ್ಥಾನಕ್ಕೆ ಸಿ.ಸಿ.ಕ್ಯಾಮರಾ ಅಳವಡಿಸಿ ಕಳ್ಳತನ ತಡೆಯಬೇಕು ಹಾಗೂ ದೇವಸ್ಥಾನಕ್ಕೆ ಬೇಕಾದ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಲೆಕ್ಕ ಕೇಳಿದರೆ ತಹಸೀಲ್ದಾರ್​ ಉತ್ತರಿಸಲ್ಲ. ನಾವು ಮೇಲಧಿಕಾರಿಗಳ ಮೊರೆ ಹೋಗುತ್ತಿದ್ದೇವೆ. ಒಂದು ವೇಳೆ ಅಲ್ಲೂ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ.

ಈಶ್ವರರೆಡ್ಡಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯ, ಎಲ್ಲೋಡು