ಜಿಲ್ಲೆ

ಎಚ್‌ಐವಿ/ಏಡ್ಸ್ ಬಗ್ಗೆ ಜಾಗೃತಿ ಅಗತ್ಯ: ಅನಿತಾ ಪೂವಯ್ಯ

ಮಡಿಕೇರಿ: ಪ್ರತಿಯೊಬ್ಬ ನಾಗರಿಕರಿಗೂ ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ನಗರಸಭೆ ಅಧ್ಯಕ್ಷೆ ಎನ್.ಪಿ.ಅನಿತಾ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವಂತಹ ವೈರಾಣು ಎಂದರೆ ಅದು ಎಚ್‌ಐವಿ ಸೋಂಕು ಆಗಿದೆ. ಸೊಂಕನ್ನು ತಡೆಗಟ್ಟಲು ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದ್ದು, ಅದರಲ್ಲಿ ಎಚ್‌ಐವಿ ಸೋಂಕಿನ ಜಾಗೃತಿ ಕಾರ್ಯಕ್ರಮ ಒಂದಾಗಿದೆ. ಹಚ್ಚೆ ಹಾಕಿಸುವುದು, ರಕ್ತವನ್ನು ಪರೀಕ್ಷಿಸದೆ ಸ್ವೀಕಾರ ಮಾಡುವುದು, ಗರ್ಭಿಣಿಯರು ಎಚ್‌ಐವಿ ಪರೀಕ್ಷೆ ಮಾಡಿಸದೆ ಇರುವುದು, ಅಸುರಕ್ಷಿತ ಲೈಂಗಿಕ ಕ್ರಿಯೆಗೆ ಒಳಗಾಗುವುದು ಇವುಗಳಿಂದ ಎಚ್‌ಐವಿ ಸೋಂಕು ಹರಡುತ್ತದೆ ಎಂದು ತಿಳಿಸಿದರು.


ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಎನ್.ಆನಂದ್ ಮಾತನಾಡಿ, ವಿಶ್ವ ಏಡ್ಸ್ ದಿನವು ಸಮುದಾಯಗಳ ಸಾಧನೆಗಳ ಆಚರಣೆಗಿಂತ ಹೆಚ್ಚಾಗಿ ತಮ್ಮ ನಾಯಕತ್ವವನ್ನು ಸಕ್ರಿಯಗೊಳಿಸುವ ಬೆಂಬಲಿಸುವ ಕ್ರಿಯೆಯಾಗಿದೆ. ಎಚ್‌ಐವಿಯನ್ನು ಅಂತ್ಯಗೊಳಿಸುವಲ್ಲಿ ಸಮುದಾಯಗಳು ನಾಯಕತ್ವದ ಪಾತ್ರವನ್ನು ಹೆಚ್ಚಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.


೨೦೩೦ರ ವೇಳೆಗೆ ಏಡ್ಸ್ ಅನ್ನು ಕೊನೆಗೊಳಿಸುವ ಗುರಿಗಳನ್ನು ಸಾಧಿಸಲು ಕಾರ್ಯಕ್ರಮದ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಎಚ್‌ಐವಿ ಪ್ರತಿಕ್ರಿಯೆಯ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಒಂದು ಅವಕಾಶವಾಗಿದೆ. ಪ್ರತಿ ವರ್ಷ ಈ ದಿನವನ್ನು ಒಂದೊಂದು ಘೋಷವಾಕ್ಯದೊಂದಿಗೆ ಪ್ರಾರಂಭಿಸಲಾಗುತ್ತದೆ. ಈ ವರ್ಷ ಘೋಷವಾಕ್ಯವು ಸಮುದಾಯಗಳು ಮುನ್ನಡೆಸಲಿ(ಸಮುದಾಯಗಳು ಮುನ್ನಡೆಸುವ ಮೂಲಕ ಜಗತ್ತಿನಲ್ಲಿ ಏಡ್ಸ್ ಅನ್ನು ಕೊನೆಗಾಣಿಸಬಹುದು) ಎಂದಾಗಿದೆ ಎಂದು ತಿಳಿಸಿದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಮಾತನಾಡಿ, ಕ್ರಮಬದ್ಧವಾದ ಜೀವನಶೈಲಿ ಇದ್ದರೆ ಎಚ್‌ಐವಿ ಸೋಂಕಿಗೆ ಒಳಗಾಗುವುದಿಲ್ಲ. ಆದ್ದರಿಂದ ಆರೋಗ್ಯಯುತವಾಗಿ ಸಮಾಜದಲ್ಲಿ ಬದುಕಲು ಸಂವಿಧಾನದಲ್ಲಿ ಹಕ್ಕಿದೆ. ಅದನ್ನು ಗಮನದಲ್ಲಿಟ್ಟುಕೊಂಡು ರಕ್ತಪರೀಕ್ಷೆ ಮಾಡಿಸಿಕೊಂಡು ಉತ್ತಮ ಆರೋಗ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.


ಸಮುದಾಯದಲ್ಲಿ ಬದುಕುವ ಹಕ್ಕು ಪ್ರತಿಯೊಬ್ಬರಿಗೆ ಕಾನೂನು ನೀಡಿದೆ. ಹಾಗೆಯೇ ರೋಗಲಕ್ಷಣ ಕಂಡು ಬಂದಲ್ಲಿ ಇನ್ನೊಬ್ಬರಿಗೆ ಹರಡಿಸುವುದು ಕಾನೂನಿನ ಅಡಿಯಲ್ಲಿ ಅಪರಾಧ. ಅದನ್ನು ಪರಿಗಣನೆಗೆ ತೆಗೆದುಕೊಂಡು ಎಚ್‌ಐವಿ ಸೋಂಕು ಇದ್ದಲ್ಲಿ ರಕ್ತಪರೀಕ್ಷೆ ಮಾಡಿಸಿ ಚಿಕಿತ್ಸೆಗೆ ಒಳಗಾಗುವ ಅಗತ್ಯ ಇದೆ ಎಂದರು.


ರೋಟರಿ ಸಂಸ್ಥೆಯ ಅಧ್ಯಕ್ಷೆ ಗೀತಾ ಗಿರೀಶ್ ಮಾತನಾಡಿ, ಎಚ್‌ಐವಿ ಸೋಂಕನ್ನು ತಡೆಗಟ್ಟಲು ಸಮುದಾಯದಿಂದಲೇ ಸಾಧ್ಯ ಎಂದರು.


ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಮಾತನಾಡಿ, ರೋಗವನ್ನು ಮರೆಯಬೇಕೆ ಹೊರತು ರೋಗಿಯನ್ನಲ್ಲ. ಸಮಾಜದಲ್ಲಿ ಇತರರಂತೆಯೇ ಎಚ್‌ಐವಿ ಸೋಂಕಿತರನ್ನು ಕಾಣಬೇಕು. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಎಚ್‌ಐವಿ ಸೋಂಕು ನಿರ್ಮೂಲನೆ ಮಾಡುವಲ್ಲಿ ಯಶಸ್ವಿ ಯಾಗೋಣ ಎಂದು ಕರೆ ನೀಡಿದರು.


ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಚೇತನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪಾಲಕ್ಷ ಇತರರು ಇದ್ದರು.