ಮುದ್ದೇಬಿಹಾಳ: ಪತ್ರಿಕೆಯ ಓದು ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗೆ ಹೆಚ್ಚು ಉಪಯುಕ್ತವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ಸ್ಪರ್ಧಿಸುವ ಹುಮ್ಮಸ್ಸು, ತಿಳಿದುಕೊಳ್ಳುವ ಉತ್ಸಾಹ, ಸಾಧಿಸುವ ತವಕ ಇರಬೇಕು ಎಂದು ಶಿಕ್ಷಣ ತಜ್ಞ, ವಿಜಯಪುರದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ವೇದ ಅಕಾಡೆಮಿ ಸಂಸ್ಥಾಪಕ ಡಾ. ಶಿವಾನಂದ ಕೆಲೂರ ಹೇಳಿದರು.
ಪಟ್ಟಣದ ಶಾ.ಎಸ್.ಪಿ. ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಐಡಿ ಕಾರ್ಡ್ ವಿತರಣೆ, ಉತ್ತಮ ಪತ್ರಕರ್ತ ಮತ್ತು ಶ್ರಮಜೀವಿ ಪತ್ರಿಕಾ ವಿತರಕ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಹಾಗೂ ಪತ್ರಿಕಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ. ಆಕಾಶ ಎಸ್.ಬಿ. ಮಾತನಾಡಿ, ಪತ್ರಿಕೋದ್ಯಮ ಮತ್ತು ಪತ್ರಕರ್ತರು ಸಮಾಜಕ್ಕೆ ಮಾರ್ಗದರ್ಶಕರಾಗಿರಬೇಕು. ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದರೆ ಪತ್ರಿಕೋದ್ಯಮ ಹೆಚ್ಚು ಪ್ರಭಾವಶಾಲಿಯಾಗುತ್ತದೆ ಎಂದು ಹೇಳಿದರು.
ಅಸ್ಕಿಫೌಂಡೇಷನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ ಮಾತನಾಡಿ, ಕಾರ್ಯನಿರತ ಪತ್ರಕರ್ತರ ಸಂಘದವರು ನಡೆಸಿರುವ ಕಾರ್ಯ ಸಾರ್ಥಕವಾದುದು. ಭವಿಷ್ಯದ ನಾಗರಿಕರಾಗಲಿರುವ ಕಾಲೇಜು ವಿದ್ಯಾರ್ಥಿಗಳಿಗೂ ಹೆಚ್ಚು ಉಪಯುಕ್ತವಾಗಿದೆ ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಜಿ. ಸಂಗಾಲೀಕ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿದರು.
ಕಾನಿಪ ಸಂಘದ ತಾಲೂಕಾಧ್ಯಕ್ಷ ಮುತ್ತು ವಡವಡಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ, ಅರಿಹಂತ ಚಾರಿಟಬಲ್ ಸಂಸ್ಥೆ ಅಧ್ಯಕ್ಷ ಮಹಾವೀರ ಸಗರಿ, ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಬೆಣ್ಣೂರ, ಬಿಜೆಪಿ ಮಹಿಳಾ ಮೊರ್ಚಾ ಅಧ್ಯಕ್ಷೆ ಗೌರಮ್ಮ ಹುನಗುಂದ, ಗುಲಾಬಚಂದ ಓಸ್ವಾಲ್, ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಎಸ್.ಎಸ್. ಅಂಗಡಿ, ಸ್ಥಳೀಯ ಪದವಿ ಕಾಲೇಜುಗಳ ಪ್ರಾಚಾರ್ಯರಾದ ಪ್ರೊ. ಸಿಕಂದರ ಧನ್ನೂರ, ಪ್ರೊ. ಎಸ್.ಎನ್.ಪೋಲೇಶಿ, ಪ್ರೊ. ವಿಪುಲ್ ಸಗರಿ, ಪ್ರೊ. ಅರುಣ ಹುನಗುಂದ, ಪ್ರೊ. ಬಸವರಾಜ ದೊಡಮನಿ, ವೈದ್ಯ ಡಾ. ಬಸವರಾಜ ಬಿರಾದಾರ ಇದ್ದರು.
ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ರವೀಂದ್ರ ನಂದೆಪ್ಪನವರ ಸ್ವಾಗತಿಸಿದರು. ಕಾನಿಪ ರಾಜ್ಯಕಾರಿಣಿ ಸದಸ್ಯ ಡಿ.ಬಿ. ವಡವಡಗಿ ನಿರೂಪಿಸಿದರು. ಡಾ. ಎಸ್.ಬಿ. ಪಾಟೀಲ ವಂದಿಸಿದರು.
ಯುವ ಸಮೂಹದಲ್ಲಿ ಮೊಬೈಲ್, ವಾಟ್ಸಪ್, ಫೆಸ್‌ಬುಕ್‌ಗಳಿಗೆ ಅಂಟಿಕೊಳ್ಳುವ ಮನೋರೋಗ ಹೋಗಬೇಕು. ಕಾರ್ಯನಿರತ ಪತ್ರಕರ್ತರ ಸಂಘವು ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಏರ್ಪಡಿಸಿ ಅವರಲ್ಲಿ ಪತ್ರಿಕೋದ್ಯಮದ ಜ್ಞಾನ ಮೂಡಿಸಲು ಮುಂದಾಗಿರುವ ಕಾರ್ಯ ಶ್ಲಾಘನೀಯ. ಡಾ. ಚೆನ್ನವೀರ ದೇವರು, ಸಂಸ್ಥಾನ ಹಿರೇಮಠ, ಕುಂಟೋಜಿ
ಮುದ್ದೇಬಿಹಾಳ ತಾಲೂಕು ಮಟ್ಟದ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ ಪಡೆದ ಸಾಗರ ಉಕ್ಕಲಿ (ನಗರ), ಜಿ.ಎನ್. ಬೀರಗೊಂಡ(ಗ್ರಾಮೀಣ) ಭಾಗದ ವರದಿಗಾರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿದ್ದು ಚಲವಾದಿ, ಶಿವಕುಮಾರ ಶಾರದಳ್ಳಿ, ಲಾಡ್ಲೇಮಶ್ಯಾಕ ನದಾಫ್, ಸಮೀರ ಅವಟಿಗೇರ ಮತ್ತು ನಾಲತವಾಡದ ಕಾಶಿನಾಥ ಬಿರಾದಾರ ಅವರಿಗೆ ಶ್ರಮಜೀವಿ ಪತ್ರಿಕಾ ವಿತರಕ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಯಿತು.
ಆಧುನಿಕ ಪತ್ರಿಕೋದ್ಯಮದಲ್ಲಿ ಯುವ ಜನತೆಯ ಪಾತ್ರ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಶಾ.ಎಸ್.ಪಿ. ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಸೌಮ್ಯ ಬಡಿಗೇರ (ಪ್ರಥಮ), ಪವಿತ್ರಾ ಹೆಬ್ಬಾಳ (ದ್ವಿತೀಯ), ಕವಿತಾ ಬಿರಾದಾರ (ತತೀಯ) ಸ್ಥಾನದ ಪಡೆದರು. ಅವರಿಗೆ ನಗದು ಪುರಸ್ಕಾರ, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸ್ಕೂಲ್ ಬ್ಯಾಗ್ ನೀಡಿ ಗೌರವಿಸಲಾಯಿತು. ಬಿ.ಎ. ನಾಡಗೌಡ ಮೌಲ್ಯಮಾಪಕರಾಗಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾನಿಪ ಸಂಘವು ಏರ್ಪಡಿಸಿದ್ದ ವನಮಹೋತ್ಸವಕ್ಕೆ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಚಾಲನೆ ನೀಡಿದರು. ರಾಣಿ ಚನ್ನಮ್ಮ ವಿವಿಯ ಹಣಕಾಸು ಅಧಿಕಾರಿ ಡಾ. ಆಕಾಶ ಎಸ್.ಬಿ., ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷ ಅಶೋಕ ರೇವಡಿ, ಮುಖಂಡರಾದ ರಾಯನಗೌಡ ತಾತರಡ್ಡಿ, ಸಿದ್ದರಾಜ ಹೊಳಿ, ಅರಣ್ಯಾಧಿಕಾರಿಗಳಾದ ಎಸ್.ಜೆ. ಸಂಗಾಲಿಕ, ಬಸನಗೌಡ ಬಿರಾದಾರ ಇದ್ದರು.