ಜಿಲ್ಲೆ

ಗಾಡ್ಗೀಳ್ ವರದಿ ಜಾರಿಗೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಆಗ್ರಹ

Mangaluru - Hariprasad Rai


ಮಂಗಳೂರು: ಪಶ್ಚಿಮ ಘಟ್ಟದ ಉಳಿವಿನ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೊಳಿಸಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ.
ರಸ್ತೆ ಅಗಲೀಕರಣ, ಪ್ರವಾಸೋದ್ಯಮ ಹೆಸರಿನಲ್ಲಿ ರೋಪ್‌ವೇ, ಸುರಂಗ ಮಾರ್ಗಗಳನ್ನು ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟ ದುರಂತ ಕತೆಗೆ ಸಾಕ್ಷಿಯಾಗಲಿದೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿಯವರು ಹಸಿರು ನೀತಿಯನ್ನು ಎಲ್ಲೂ ಅನುಸರಿಸುತ್ತಿಲ್ಲ. ಶಿರೂರು ಘಟನೆಯಲ್ಲಿ ಮತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ತಲಾ 5 ಕೋಟಿ ರೂ. ಪರಿಹಾರವನ್ನು ಅಲ್ಲಿ ಕಾಮಗಾರಿ ನಡೆಸುತ್ತಿರುವ ಇರ್ಕಾನ್ ಸಂಸ್ಥೆಯಿಂದ ನೀಡಬೇಕು. ಕಳಪೆ ಕಾಮಗಾರಿ ಮಾಡಿದ ಕಂಪನಿಗಳನ್ನು ಕಪ್ಪು ಪಟ್ಟಿಗೆ ಹಾಕಿ ಇಂಜಿನಿಯರ್‌ಗಳಿಗೆ ಶಿಕ್ಷೆ ವಿಧಿಸ ಬೇಕೆಂದು ಶಶಿಧರ ಶೆಟ್ಟಿ ಒತ್ತಾಯಿಸಿದರು.
ಮಳೆ ಹೆಚ್ಚಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಎಷ್ಟೇ ಮಳೆ ಸುರಿದರೂ ಪಶ್ಚಿಮ ಘಟ್ಟದಲ್ಲಿ ಅದನ್ನು ಹಿಡಿದಿಟ್ಟುಕೊಳ್ಳುವ ಶೋಲಾ ಅರಣ್ಯವನ್ನು ನಿರಂತರವಾಗಿ ಸರ್ಕಾರದ ಅವೈಜ್ಞಾನಿಕ ಯೋಜನೆಗಳಿಗಾಗಿ ಕಡಿಯುತ್ತಾ ಬರಲಾಗಿದೆ. ನೇತ್ರಾವತಿ, ಹೇಮಾವತಿ, ಶರಾವತಿ ನದಿ ಮೂಲಗಳಲ್ಲಿ ಮಾನವ ಹಸ್ತಕ್ಷೇಪ, ಸರ್ಕಾರದ ಅಸಂಬದ್ಧ ಯೋಜನೆಗಳು ಹೆಚ್ಚಿದ ಕಾರಣ ವಯನಾಡ್‌ನಂತಹ ದುರಂತಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಹೇಳಿದರು.
ವಯನಾಡ್‌ನ ಬೆಟ್ಟಗುಡ್ಡ, ಕಣಿವೆ ಪ್ರದೇಶಗಳ ಕಾಫಿ, ಟೀ ಎಸ್ಟೇಟ್‌ಗಳ ನಡುವೆ ರೆಸಾರ್ಟ್‌ಗಳನ್ನು ರಚನೆ ಮಾಡಿದ ಪ್ರದೇಶ. ಈ ಹಿಂದೆ ಅಲ್ಲಿ ಭೂಕುಸಿತ ಆಗಿದ್ದಾಗ ಎಚ್ಚರಿಕೆ ನೀಡಲಾಗಿತ್ತು. ಇದೇ ರೀತಿ ಸಕಲೇಶಪುರ, ಮೂಡಿಗೆರೆಯಲ್ಲೂ ಭೂಕುಸಿತಗಳು
ಸಂಭವಿಸಿವೆ. ಸರ್ಕಾರ ಈ ಭೂಕುಸಿತಗಳ ಹಿಂದಿನ ವೈಜ್ಞಾನಿಕ ಕಾರಣಗಳನ್ನು ತಿಳಿದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಅರಣ್ಯ ಒತ್ತುವರಿ, ಹೋಂಸ್ಟೇಗಳು ಇರುವಲ್ಲಿಯೇ ಹೆಚ್ಚಿನ ಪ್ರಮಾಣದ ಭೂಕುಸಿತಗಳು ಸಂಭವಿಸುತ್ತಿರುವುದರಿಂದ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.