ರಟ್ಟಿಹಳ್ಳಿ: ರೈತರೇ ಬೆಳೆ ವಿವರವನ್ನು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ದಾಖಲಿಸಬೇಕು ಮತ್ತು ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಬೆಳೆ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಅನುಸರಿಸಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ರೈತರಲ್ಲಿ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು 2025-26 ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಬಿಡುಗಡೆ ಮಾಡಲಾಗಿದೆ. ಆಪ್ ಇನ್ಸ್ಟಾಲ್ ಮಾಡಿಕೊಂಡು ಸಮೀಕ್ಷೆ ಮಾಡಿದ ಬೆಳೆ ವಿವರ ದಾಖಲಿಸಬಹುದು. ಮಾಹಿತಿ ತಪ್ಪಾಗಿದ್ದರೆ, ನಿಗದಿತ ದಿನಾಂಕದೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳೆ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗದ ಅಥವಾ ಬೆಳೆ ಸಮೀಕ್ಷೆ ಮಾಡದೆ ಇರುವ ರೈತರ ಜಮೀನಿನಲ್ಲಿ ಖಾಸಗಿ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆ ಮಾಡಲಾಗುತ್ತದೆ. ಖಾಸಗಿ ನಿವಾಸಿಗಳು ರೈತರ ಜಮೀನುಗಳಿಗೆ ಬೆಳೆ ಸಮೀಕ್ಷೆ ಮಾಡಲು ಬಂದಾಗ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಬೆಳೆ ಸಂರಕ್ಷಣೆ: ಅತಿಯಾದ ಮಳೆಯಿಂದಾಗಿ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳವಣಿಗೆ ಕುಂಠಿತವಾಗಿದೆ. ಅತಿಯಾದ ತೇವಾಂಶದಿಂದ ಹಳದಿ ಬಣಕ್ಕೆ ತಿರುಗಿ ನಂತರ ಕಂದು ಬಣಕ್ಕೆ ತಿರುಗುತ್ತವೆ. ರೈತರು ತ ಹೊಲಗಳಲ್ಲಿ ನಿಂತಿರುವ ನೀರನ್ನು ಬಸಿಕಾಲುವೆಗಳ ಮುಖಾಂತರ ಬಸಿದು ಹೋಗುವಂತೆ ಕ್ರಮ ವಹಿಸಬೇಕು. ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 17:44:00., 12:61:0 ಅಥವಾ 13:40:13 ಅಥವಾ 19:19:19 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 4 ಗ್ರಾಂ ಬೆರೆಸಿ ಎಲೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಬೆಳೆಗಳು ಬೇಗನೆ ಚೇತರಿಸಿಕೊಳ್ಳುತ್ತವೆ ಎಂದು ಸಲಹೆ ನೀಡಿದ್ದಾರೆ.