ಜಿಲ್ಲೆ

ವಸತಿ ನಿಲಯ ನಿರ್ಮಾಣಕ್ಕೆ ಅಗತ್ಯ ನೆರವು

ರೋಣ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ನಿರ್ಮಾಣಕ್ಕೆ ಪುರಸಭೆಯಿಂದ ಅಗತ್ಯ ನೆರವು ನೀಡಲಾಗುತ್ತದೆ ಎಂದು ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 108ನೇ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರಸು ಅವರ ಆಡಳಿತದಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರು. ಹಿಂದುಳಿದ ಆಯೋಗ ಸ್ಥಾಪಿಸಿದರು. ಭೂ ಸುಧಾರಣೆ ಕಾಯಿದೆ ಜಾರಿಗೆ ತಂದರು. ಇಂತಹ ಧೀಮಂತ ನಾಯಕರು ನಮ್ಮ ರಾಜ್ಯಕ್ಕೆ ಸಿಕ್ಕಿದ್ದು ಹೆಮ್ಮೆಯ ಸಂಗತಿ ಎಂದರು.
ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ವಸತಿ ನಿಲಯ ನಿರ್ಮಾಣಕ್ಕೆ ಅಗತ್ಯವಿರುವ ಜಾಗ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ರವಿ ಗುಂಜಿಕರ ಮಾತನಾಡಿ ವಸತಿ ನಿಲಯಗಳಲ್ಲಿ ಊಟ, ವಸತಿಯ ಜತೆಗೆ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಪಠ್ಯದ ಜತೆ ಸಾಂಸ್ಕೃತಿಕ ಚಟುವಟಿಕೆ, ವ್ಯಕ್ತಿತ್ವ ವಿಕಸನ, ಕರಾಟೆ, ಕ್ರಿಡಾಕೂಟಗಳು ಸೇರಿದಂತೆ ಅನೇಕ ಅನುಕೂಲಗಳನ್ನು ಒದಗಿಸಲಾಗಿದೆ ಎಂದರು.

ಗಣ್ಯರನ್ನು ಮತ್ತು ವಸತಿ ನಿಲಯಗಳಲ್ಲಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡಿ. ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆಗೆ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿದರು. ವಸತಿ ನಿಲಯದಲ್ಲಿ ಡಿ.ದೇವರಾಜ ಅರಸು ಅವರ ಮೂರ್ತಿಯನ್ನು ಅನಾವರಣ ಮಾಡಲಾಯಿತು. ಗಜೇಂದ್ರಗಡ ತಾಪಂ ಇಒ ಡಿ. ಮೋಹನ, ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಬಸವರಾಜ ಬಳ್ಳಾರಿ, ಅಕ್ಷರದಾಸೋಹ ಇಲಾಖೆ ಅಧಿಕಾರಿ ಬಸವರಾಜ ಅಂಗಡಿ, ಡಿ.ಎಚ್. ವಸ್ತ್ರದ, ಸಿ.ಬಿ. ಕಲಕೇರಿ, ಶಿವಪುತ್ರಪ್ಪ ಕುನಸಗಿ, ಎಂ.ಎಸ್. ಗೋಡಿ, ಪ್ರಭಾಕರ ಛಲವಾದಿ, ಜಯದೇವಿ ಗೌಡರ, ಮಂಜುನಾಥ ಅಂಬಿಗೇರ, ಹನಮಂತ ಯರಗೇರಿ, ಅಂದಾನಪ್ಪ ಬಳಿಗೇರ ಇತರರಿದ್ದರು.