ಕುಶಾಲನಗರ: ಚಿಕ್ಕತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ ಪ್ರದೇಶಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್‌ಕುಮಾರ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಆ ಭಾಗದ ರೈತರ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದ ಅವರು, ರೈತರ ಅಹವಾಲು ಆಲಿಸಿದರು. ಕಾಡಾನೆಗಳು ಸಲೀಸಾಗಿ ಅರಣ್ಯದಿಂದ ಅಗಮಿಸುವ ಮಾರ್ಗದಲ್ಲಿ ಕಂದಕಗಳ ದುರಸ್ತಿ ಬಗ್ಗೆ ರೈತರು ಅಧಿಕಾರಿಯ ಗಮನ ಸೆಳೆದರು.
ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಆನೆ ಕಂದಕ ಮಣ್ಣಿನಿಂದ ಮುಚ್ಚಿಹೋಗಿದೆ. ಅದನ್ನು ದುರಸ್ತಿಗೊಳಿಸಬೇಕು. ಸೋಲಾರ್ ಬೇಲಿ ನಿರ್ಮಿಸುವುದರೊಂದಿಗೆ ಕಾಡಾನೆ ಹಾವಳಿ ಶಾಶ್ವತವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಈ ಭಾಗದಲ್ಲಿ ನಿರ್ಮಿಸಿರುವ ಆನೆ ಕಂದಕ ಅವೈಜ್ಞಾನಿಕವಾಗಿದೆ. ಮಳೆ ನೀರು ನಿಂತು ಕಂದಕದ ಎರಡೂ ಬದಿ ಮಣ್ಣು ಕುಸಿದು ಕಂದಕ ಕಿರಿದಾಗಿದೆ. ಇದರಿಂದ ಕಾಡಾನೆ ಸಲೀಸಾಗಿ ದಾಟುತ್ತಿವೆ. ಕಂದಕವನ್ನು ವಿಸ್ತರಿಸಬೇಕು. ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಯೋಜನೆಗಳ ಮೂಲಕ ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಕ್ರಮ ವಹಿಸುವಂತೆ ಆಗ್ರಹಿಸಿದರು.
ಸಮಸ್ಯೆ ಆಲಿಸಿದ ಆರ್‌ಎಫ್‌ಒ ರತನ್‌ಕುಮಾರ್ ಮಾತನಾಡಿ, ಕಾಡಾನೆ ಹಾವಳಿ ತಡೆಗಟ್ಟಲು ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಸ್ಥಳೀಯರಾದ ವಿ.ಜೆ.ನವೀನ್, ಉದಯ, ಗ್ರಾಪಂ ಸದಸ್ಯ ದಿನೇಶ್, ಡಿಆರ್‌ಎಫ್‌ಒ ಅನೀಲ್ ಮತ್ತಿತರರಿದ್ದರು.