ಮಾಗಡಿ: ರಸ್ತೆ ವಿಸ್ತರಣೆ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ, ಸಮರ್ಪಕವಾಗಿ ಗುಣಮಟ್ಟದ ರಸ್ತೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಎಚ್.ಸಿ.ಬಾಲಕೃಷ್ಣ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಗಾಂಧೀನಗರ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೆ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳೊಂದಿಗೆ ಭಾನುವಾರ ರಸ್ತೆ ವಿಸ್ತರಣೆ ಸಂಬಂಧ ಪರಿಶೀಲಿಸಿ ಮಾತನಾಡಿದ ಅವರು, ಮಾದರಿಯ ರಸ್ತೆಯನ್ನಾಗಿ ಮಾಡಲು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ಮೊದಲು ಗುಣಮಟ್ಟದ ಚರಂಡಿಗಳನ್ನು ರಸ್ತೆಯ ಎರಡು ಬದಿ ನಿರ್ಮಿಸಲಾಗುತ್ತಿದೆ. ಚರಂಡಿ ಕಾಮಗಾರಿ ಗುಣಮಟ್ಟದಿಂದ ನಡೆಸಿ ಕಡ್ಡಾಯವಾಗಿ ಕ್ಯೂರಿಗ್ ಮಾಡಬೇಕು. ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ದೂರುಗಳಯ ಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರಸ್ತೆ ವಿಸ್ತರಣೆ ಸರ್ವೇಯನ್ನು ಸಮರ್ಪಕವಾಗಿ ನಿರ್ವಹಿಸಿ, ಇದಕ್ಕಾಗಿ ಜಂಟೀ ಸರ್ವೇ ನಡೆಸಿ ಮಾರ್ಕ್ ಮಾಡಿ, ಒತ್ತುವರಿ ತೆರವುಗೊಳಿಸಬೇಕು. ಆಸ್ತಿ, ಮನೆ, ನಿವೇಶನ, ಜಾಗ ಒತ್ತುವರಿಯಾಗಿದ್ದರೆ ನೋಟಿಸ್ ಜಾರಿ ಮಾಡಿ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು.
ಗಾಂಧಿನಗರ ವೃತ್ತದಿಂದ 19 ಮೀಟರ್ ರಸ್ತೆ ವಿಸ್ತರಣೆಯಾಗಲಿದೆ. ಹಾಗೂ ಗೌರಮ್ಮನಕೆರೆವರೆಗೆ 800 ಮೀಟರ್ 4 ಪಥದ ರಸ್ತೆ, ಉಳಿದ 100 ಮೀಟರ್ ದ್ವಿಪಥ ರಸ್ತೆಯಾಗಲಿದೆ. ರಸ್ತೆಗೆ ಭೂಮಿ ಕಳೆದುಕೊಳ್ಳುವವರಿಗೆ ಗೊಂದಲ ಸೃಷ್ಟಿ ಬೇಡ, ಸೂಕ್ತ ಪರಿಹಾರ ಕೊಡೋಣ. ಏನಿದ್ದರೂ ಗುಣಮಟ್ಟದ ಉತ್ತಮ ರಸ್ತೆಯಾಗಬೇಕಷ್ಟೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಸಾರ್ವಜನಿಕವಾಗಿ ಉತ್ತಮ ರಸ್ತೆಯಾದರೆ ಸಂಚಾರಕ್ಕೆ ಮತ್ತು ವಾಸ ಮಾಡುವವರಿಗೆ ತುಂಬ ಅನುಕೂಲವಾಗಲಿದೆ. ನಿವೇಶನದ ಬೆಲೆಯೂ ದ್ವಿಗುಣವಾಗುತ್ತದೆ ಎಂದರು.
ಗಾಂಧಿವೃತ್ತದಲ್ಲಿ ಬೃಹತ್ ಗಾಂಧಿ ಪ್ರತಿಮೆ
ಗಾಂಧಿ ವೃತ್ತದಲ್ಲಿ ವಿಧಾನಸೌಧದ ಬಳಿ ಇರುವ ಮಹಾತ್ಮಗಾಂಧೀಜಿ ಪ್ರತಿಮೆ ಮಾದರಿಯಲ್ಲಿ 6 ಅಡಿ ಎತ್ತರದ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಸ್ಥಳದ ಅಭಾವ ಕಂಡು ಬಂದರೆ ನಿಂತಿರುವ ಮಾದರಿಯಲ್ಲಿ ಪ್ರತಿಮೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.