ಜಿಲ್ಲೆ

ಸಂಭ್ರಮದ ನೇರ್ಲಿಗೆ ರಂಗನಾಥ ಸ್ವಾಮಿ ರಥೋತ್ಸವ

ಮಾಯಕೊಂಡ: ಸಮೀಪದ ನೇರ್ಲಿಗೆ ಗ್ರಾಮದ ಶ್ರೀರಂಗನಾಥ ಸ್ವಾಮಿ ರಥೋತ್ಸವ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ಮೂರು ದಿನ ನಡೆದ ಶ್ರೀರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಮಾ.6ರ ಮುಂಜಾನೆ ಹೊಳೆ ಪೂಜೆ ಶಾಸ್ತ್ರ, ಸಂಜೆ ಸ್ವಾಮಿಗೆ ಅರಿಶಿನ ಶಾಸ್ತ್ರ ನಡೆಯಿತು. ಮಾ.7ರ ಶುಕ್ರವಾರ ಬೆಳಗ್ಗೆ ರಥೋತ್ಸವಕ್ಕೆ ಕಳಸವನ್ನು ಏರಿಸಲಾಯಿತು ನಂತರ ಹುಚ್ಚಯ್ಯ ಉತ್ಸವ ಜರುಗಿತು. ಶನಿವಾರ ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ನಂತರ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ರಂಗನಾಥ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ನೀಡಿದರು. ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸಿ ರಥವನ್ನು ಎಳೆದರು.

ಆನಗೋಡು, ನೇರ್ಲಿಗೆ, ಗಂಗನಕಟ್ಟೆ, ಸುಲ್ತಾನಿಪುರ, ಈಚಗಟ್ಟ, ಚಿನ್ನಸಮುದ್ರ, ಕೊಡಗನೂರು ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿದ್ದರು.