ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿಪತ್ತು ನಿರ್ವಹಣೆಯ ಕಾರ್ಯಾಚರಣೆಗೆ ಸನ್ನದ್ಧರಾಗಿ ಬಂದಿರುವ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂ ಸೇವಕರು ತಮ್ಮ ಊರಿನಲ್ಲಿ ಸೇವಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶೌರ್ಯ ತಂಡವು ಕರ್ನಾಟಕ ರಾಜ್ಯದ ವರದಾನ ಎಂದು ಎನ್‌ಡಿಆರ್‌ಎಫ್ ಇನ್‌ಸ್ಪೆಕ್ಟರ್ ಶಾಂತಿಲಾಲ್ ಜಟಿಯಾ ಹೇಳಿದರು.
ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಘಟಕಗಳ ಪ್ರತಿನಿಧಿಗಳು ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ)ನ ಭೇಟಿ ಪುತ್ತೂರಿನ ಎಪಿಎಂ ರೈತ ಭವನದಲ್ಲಿ ನಡೆಯಿತು.
ಮಂಗಳೂರು ಉಳ್ಳಾಲದಲ್ಲಿ ನಡೆದ ಗುಡ್ಡ ಕುಸಿತ ಸಂದರ್ಭ ಎನ್‌ಡಿಆರ್‌ಎಫ್ ತಂಡದ ಜತೆಗೆ ಶೌರ್ಯ ಸ್ವಯಂಸೇವಕರು ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಚಾರ. ಯಾವುದೇ ರೀತಿಯ ವಿಪತ್ತು ಸಂಭವಿಸಿದ್ದಲ್ಲಿ ಎನ್‌ಡಿಆರ್‌ಎಫ್ ತಂಡದ ಜತೆ ಶೌರ್ಯ ಸ್ವಯಂಸೇವಕರು ಕರ್ತವ್ಯ ನಿರ್ವಹಿಸಲು ಸಿದ್ಧರಿದ್ದಾರೆ. ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಭಾಗವಹಿಸಿ ಎನ್‌ಡಿಆರ್‌ಎಫ್ ತಂಡದೊಂದಿಗೆ ನೆರವಾಗಿದೆ. ಈ ತಂಡವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿರುವುದು ಸಮಾಜಕ್ಕೆ ನೀಡಿದ ಕೊಡುಗೆ ಎಂದರು.
ಎಸ್‌ಕೆಡಿಆರ್‌ಡಿಪಿ., ಬಿ.ಸಿ.ಟ್ರಸ್ಟ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್‌ಎಸ್.ಎಸ್. ನೀಡಿದ ಶೌರ್ಯ ಶ್ರೀಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರನ್ನು ಬಳಸಿಕೊಳ್ಳುವ ಕುರಿತಾದ ಮನವಿ, ಮಾಹಿತಿ ಪತ್ರವನ್ನು ಎನ್‌ಡಿಆರ್‌ಎಫ್ ಮುಖ್ಯಸ್ಥರಿಗೆ ನೀಡಲಾಯಿತು.
ಜನಜಾಗೃತಿ ವಿಭಾಗ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್, ದ.ಕ. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ, ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ್ ಪಟಗಾರ, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ., ಶೌರ್ಯ ಸಮಿತಿಯ ಸುಳ್ಯ ತಾಲೂಕಿನ ಜಯರಾಮ್ ಪಿ.ಜಿ., ಕ್ಯಾಪ್ಟನ್ ಸತೀಶ್, ಪುತ್ತೂರು ತಾಲೂಕಿನ ಮನೋಜ್, ಕ್ಯಾಪ್ಟನ್ ಸುರೇಶ್, ಘಟಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಶೌರ್ಯ ತಂಡದಿಂದ ನೆರವು
ಈ ಬಾರಿ ಪುತ್ತೂರು, ಉಡುಪಿ, ಅಂಕೋಲ, ಮಡಿಕೇರಿಯಲ್ಲಿ ಪ್ರವಾಹದ ಮುಂಚಿತವಾಗಿಯೇ ಎನ್‌ಡಿಆರ್‌ಎಫ್ ತಂಡದ 100 ಯೋಧರು ಬೇರೆ ಬೇರೆ ಕಡೆಗಳಲ್ಲಿ ಸನ್ನದ್ಧರಾಗಿದ್ದಾರೆ. ಪುತ್ತೂರಿನಲ್ಲಿ ಇನ್ಸ್‌ಪೆಕ್ಟರ್ ಶಾಂತಿಲಾಲ್ ಜಟಿಯಾ, ಉಡುಪಿಯಲ್ಲಿ ಇನ್‌ಸ್ಪೆಕ್ಟರ್ ರಾಜೇಂದ್ರಕುಮಾರ್, ಅಂಕೋಲದಲ್ಲಿ ಇನ್‌ಸ್ಪೆಕ್ಟರ್ ಕಮಲೇಶ್, ಮಡಿಕೇರಿಯಲ್ಲಿ ಇನ್‌ಸ್ಪೆಕ್ಟರ್ ಹರೀಶ್ಚಂದ್ರ ಪಾಂಡೆ ನಾಯಕತ್ವವನ್ನು ವಹಿಸಲಿದ್ದಾರೆ ಇವರನ್ನೂ ಭೇಟಿ ಮಾಡಿ ಶೌರ್ಯ ತಂಡದ ನೆರವು ನೀಡಲಾಗುವುದು.
ರಾಜ್ಯದ 91 ತಾಲೂಕಿನಲ್ಲಿ 10,000ಕ್ಕೂ ಮಿಕ್ಕಿದ ಶೌರ್ಯ ಸ್ವಯಂಸೇವಕರು ವಿಪತ್ತಿನ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೌರ್ಯ ತಂಡಗಳಿಗೆ ಎನ್‌ಡಿಆರ್‌ಎಫ್ ಪಡೆಯಿಂದ ತರಬೇತಿ ನೀಡಲಾಗುತ್ತದೆ. ಎನ್‌ಡಿಆರ್‌ಎಫ್ ಇನ್‌ಸ್ಪೆಕ್ಟರ್ ಶಾಂತಿಲಾಲ್ ಜಟಿಯಾ ಶ್ರೀ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ 2,000 ಮಂದಿಗೆ ಪ್ರಥಮಚಿಕಿತ್ಸೆ, ತುರ್ತು ಕಾರ್ಯಾಚರಣೆಯ ತರಬೇತಿ ನೀಡಿದ ಅಧಿಕಾರಿಯಾಗಿದ್ದಾರೆ. ಆಪತ್ತಿನ ಸಂದರ್ಭದಲ್ಲಿ ಸ್ವಯಂಸೇವಕರು ಸಿದ್ಧರಿದ್ದಾರೆ. ವಿವೇಕ್ ವಿ.ಪಾಯಸ್, ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ https://www.vijayavani.net/a-young-man-fell-while-trying-to-board-a-train-and-was-seriously-injured https://www.vijayavani.net/two-arrested-for-transporting-foreign-liquor