ಜಿಲ್ಲೆ

ಪ್ರವಾಹದ ಸ್ಥಳಕ್ಕೆ ಎನ್​ಡಿಆರ್​ಎಫ್ ತಂಡ ಭೇಟಿ

ಉತ್ತರ ಕನ್ನಡ ಡೆಸ್ಕ್

ಹಾನಗಲ್ಲ: ಅತಿಯಾದ ಮಳೆಯಾಗಿ ವರದಾ ಮತ್ತು ಧರ್ವ ನದಿಗಳು ಉಕ್ಕೇರಿದಾಗ ಪ್ರವಾಹ ಭೀತಿ ಎದುರಿಸುವ ತಾಲೂಕಿನ ಗ್ರಾಮಗಳಿಗೆ ಶನಿವಾರ ಎನ್​ಡಿಆರ್​ಎಫ್ ತಂಡದವರು ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ದಿನಗಳಲ್ಲಿ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಮತ್ತು ಪ್ರಾಕೃತಿಕ ವಿಕೋಪಗಳ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶ ವಿಜಯವಾಡದ ಕೇಂದ್ರ ಕಮಾಂಡೆಂಟ್ 10ನೇ ಬೆಟಾಲಿಯನ್​ನ 10 ಜನರ ತಂಡ ತಾಲೂಕಿಗೆ ಆಗಮಿಸಿ, ಗ್ರಾಮಸ್ಥರಿಂದ ಪ್ರವಾಹ ಸಂದರ್ಭಗಳಲ್ಲಿ ಉಂಟಾದ ಸಮಸ್ಯೆಗಳ ಮಾಹಿತಿ ಪಡೆದರು.

ತಾಲೂಕಿನ ವರದಾ ನದಿ ತಟದಲ್ಲಿರುವ ಕೂಡಲ, ಹರನಗಿರಿ, ಅಲ್ಲಾಪೂರ, ನಾಗನೂರ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಬೆಳೆಹಾನಿ, ವಸತಿ ಸಮಸ್ಯೆ, ಜಾನುವಾರುಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಪ್ರವಾಹದ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಎನ್​ಡಿಆರ್​ಎಫ್ ತಂಡದವರು ಗ್ರಾಮಸ್ಥರಿಗೆ ವಿವರಿಸಿದರು.

ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಎನ್​ಡಿಆರ್​ಎಫ್ ತಂಡದ ಇನ್​ಸ್ಪೆಕ್ಟರ್ ಹರೀಶಚಂದ್ರ ಪಾಂಡೆ, ಜಿಲ್ಲೆಯಲ್ಲಿ ಪ್ರವಾಹ ಸಮಯದಲ್ಲಿ ಆಗುವ ಅನಾಹುತಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮಾಹಿತಿ ಸಂಗ್ರಹಿಸಿ ಕೇಂದ್ರಕ್ಕೆ ರವಾನಿಸಲಾಗುತ್ತದೆ ಎಂದರು. ಸಬ್​ಇನ್​ಸ್ಪೆಕ್ಟರ್ ಮುನಿಕೃಷ್ಣ, ಹವಾಲ್ದಾರ್ ನಾಗರಾಜ ಇದ್ದರು.