ಜಿಲ್ಲೆ

ಉಪಚುನಾವಣೆ ಮೂರೂ ಕಡೆ ಎನ್​ಡಿಎ ಗೆಲ್ಲಲಿದೆ

ಬಸವರಾಜ ವೀರಪ್ಪ ಗರಗ

ಶಿಗ್ಗಾಂವಿ: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಹಗರಣಗಳನ್ನು ಜನರ ಮುಂದಿಟ್ಟು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಉಪಚುನಾವಣೆಯ ಮೂರೂ ಕ್ಷೇತ್ರಗಳನ್ನು ಎನ್​ಡಿಎ ಮೈತ್ರಿಕೂಟ ಗೆಲ್ಲಲಿದೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಾಟಾಗಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಹಾಗೂ ಕ್ಷೇತ್ರದ ಉಪಚುನಾವಣೆಯ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶಿಗ್ಗಾಂವಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾಗಿದೆ. ಅವರ ಅಭಿವೃದ್ಧಿ ಕಾರ್ಯಗಳು ಉಪ ಚುನಾವಣೆಯಲ್ಲಿ ಗೆಲುವಿನ ಶ್ರೀರಕ್ಷೆ ಆಗಲಿವೆ. ಇಲ್ಲಿ ಸ್ಪರ್ಧಿಸುವ ಎನ್​ಡಿಎ ಅಭ್ಯರ್ಥಿಗೆ ಜೆಡಿಎಸ್ ಕಾರ್ಯಕರ್ತರು ಸಂಪೂರ್ಣ ಬೆಂಬಲ ಸೂಚಿಸುವ ಮೂಲಕ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯದ ಹಿಂದುಳಿದ ವರ್ಗಗಳನ್ನು ವಂಚಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದರಿಂದ ಜನರೇ ಸರ್ಕಾರದ ವಿರುದ್ಧ ರೋಸಿ ಹೋಗಿದ್ದಾರೆ ಎಂದರು.

ರೈತರು ಬರಗಾಲ, ಅತಿವೃಷ್ಟಿಯಂತಹ ಭೀಕರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕಾಂಗ್ರೆಸ್ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇಂತಹ ರೈತ ವಿರೋಧಿ ಸರ್ಕಾರಕ್ಕೆ ಪಾಠ ಕಲಿಸುವ ಸಮಯ ಬಂದಾಗಿದೆ. ಕಾರ್ಯಕರ್ತರು ಪರಸ್ಪರ ಹೊಂದಾಣಿಕೆ ಮೂಲಕ ಇಲ್ಲಿನ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.

ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಮಾತನಾಡಿ, ವಾರಂಟಿ ಇಲ್ಲದಂತಹ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಆಡಳಿತಕ್ಕೆ ಬಂದ ಕಾಂಗ್ರೆಸ್ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶೀಘ್ರದಲ್ಲಿಯೇ ಕಾಂಗ್ರೆಸ್ ಸರ್ಕಾರದ ಆಡಳಿತ ಕೊನೆಗೊಳ್ಳಲಿದೆ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು, ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿದರು. ವೆಂಕನಗೌಡ ನಾಡಗೌಡ, ಈರಣ್ಣ ನವಲಗುಂದ, ಸಂಜೀವ ಮಣ್ಣನವರ, ಜೆ.ಪಿ. ಪಠಾಣ, ಕತಲಸಾಬ್ ಬಣಕಾರ, ಎಂ.ಎಸ್. ಹಣಗಿ, ಆರ್.ಬಿ. ಪಾಟೀಲ, ರಾಜು ಮಾಳವದೆ, ಬಿ.ಸಿ. ಗುದ್ಲಿಶೆಟ್ಟರ್, ಜಿಲ್ಲಾ, ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.

ಜೆಡಿಎಸ್​ಗೆ ಟಿಕೆಟ್ ನೀಡಲು ಒತ್ತಾಯವಿಲ್ಲ

ಶಿಗ್ಗಾಂವಿ: ಚನ್ನಪಟ್ಟಣದಲ್ಲಿ ಜೆಡಿಎಸ್ ಸಾಂಪ್ರದಾಯಿಕ ಮತಗಳಿವೆ. ಯಾವುದೇ ಕಾರ್ಯಕರ್ತರನ್ನು ನಿಲ್ಲಿಸಿದರೂ ಸುಮಾರು 80 ಸಾವಿರಕ್ಕೂ ಅಧಿಕ ಮತಗಳು ಬೀಳುತ್ತವೆ. ಜೆಡಿಎಸ್ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎನ್ನುವುದು ಜೆಡಿಎಸ್ ಮುಖಂಡರು, ಕಾರ್ಯಕರ್ತರ ಅಭಿಲಾಷೆ. ಆದರೆ, ಜೆಡಿಎಸ್​ಗೆ ಟಿಕೆಟ್ ನೀಡುವಂತೆ ನನ್ನ ಒತ್ತಾಯ ಇಲ್ಲ ಎಂದು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದವರು. ಕುಮಾರಣ್ಣ ಅವರ ಸ್ವಕ್ಷೇತ್ರ ಚನ್ನಪಟ್ಟಣ. ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಈಗ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಚನ್ನಪಟ್ಟಣದ ಉಪಚುನಾವಣೆಗೆ ಸಿ.ಪಿ. ಯೋಗೇಶ್ವರ ಅವರು ಆಕಾಂಕ್ಷಿ ಎಂದು ಹೇಳಿದ್ದಾರೆ. ಅಂತಿಮವಾಗಿ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ನಿರ್ಧಾರ ಮಾಡಲಿದ್ದಾರೆ. ಯಾರು ಸ್ಪರ್ಧಿಸಿದರೆ ಕಾಂಗ್ರೆಸ್ ಸೋಲಿಸಬಹುದು ಎಂಬ ಬಗ್ಗೆ ಈಗಾಗಲೇ ಪಕ್ಷದ ಹಿರಿಯರು ಮಾಹಿತಿ ಸಂಗ್ರಹಿಸಿದ್ದಾರೆ ಎಂದರು.

ನನಗೆ ಪಕ್ಷದಲ್ಲಿ ಒಂದು ಜವಾಬ್ದಾರಿ ಕೊಟ್ಟಿದ್ದಾರೆ. ಏಳು ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದೇನೆ. ನನ್ನ ಮುಂದೆ ಪ್ರಾದೇಶಿಕ ಪಕ್ಷದ ಸಂಘಟನೆ ಜವಾಬ್ದಾರಿ ಇದೆ. ಪಕ್ಷ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ದೇವೇಗೌಡರ 62 ವರ್ಷದ ರಾಜಕಾರಣದ ಬದುಕಿನಲ್ಲಿ ಮೊದಲನೇ ಬಾರಿ ಬಿಜೆಪಿ ಜೊತೆ ಇದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮೆಚ್ಚಿ ಅವರ ನಾಯಕತ್ವದ ಜತೆಗೆ ನಾವೂ ಹೆಜ್ಜೆ ಹಾಕಬೇಕೆಂದು ದೇವೇಗೌಡರು ಎನ್​ಡಿಎ ಭಾಗವಾಗಿದ್ದಾರೆ ಎಂದರು.