ಚನ್ನಪಟ್ಟಣ: ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ಕೋಡಂಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಐದು ವರ್ಷ ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಕ್ಷೇತ್ರದ ಜನ ಬೆಂಬಲ ಕೊಟ್ಟಿದ್ದರು. ಆದರೆ, ಅನಿವಾರ್ಯವಾಗಿ ಅವರು ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದಾರೆ ಎಂದರು.
ಸದ್ಯ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಎನ್‌ಡಿಎ ಒಕ್ಕೂಟದ ಒಂದು ಭಾಗ. ಹಾಗಾಗಿ, ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆನೀಡಿದರು.
ಸಿಪಿವೈ ಪರ ಬಿಜೆಪಿ ನಾಯಕರ ಬ್ಯಾಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯ ಕೆಲ ರಾಜ್ಯನಾಯಕರು ಅವರವರ ಅಭಿಪ್ರಾಯ ತಿಳಿಸಿದ್ದಾರೆ. ಅದನ್ನು ಸ್ವಾಗತ ಮಾಡುತ್ತೇವೆ. ಆದರೆ, ಅಂತಿಮವಾಗಿ ಬಿಜೆಪಿ ವರಿಷ್ಠರು ಹಾಗೂ ಕುಮಾರಸ್ವಾಮಿ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡುತ್ತಾರೆ. ಯಾರೇ ಅಭ್ಯರ್ಥಿ ಆದರೂ, ಎರಡೂ ಪಕ್ಷಗಳು ಬೆಂಬಲ ಕೊಡಬೇಕು. ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಬೇಕು. ಯಾರೇ ಅಭ್ಯರ್ಥಿ ಆದರೂ ನಮ್ಮ ಪಕ್ಷದ ಕಾರ್ಯಕರ್ತರು ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೆಲುವು ಖಚಿತ! ಕ್ಷೇತ್ರ ಕಬ್ಜಗೆ ಡಿಕೆಶಿ ಪ್ಲ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಮೂರು ಬಾರಿ ಸಂಸದರಾಗಿದ್ದರು. ಈಗ ಆ ಕ್ಷೇತ್ರವನ್ನೇ ಅವರು ಕಳೆದುಕೊಂಡಿದ್ದಾರೆ. ಐದು ಕ್ಷೇತ್ರಗಳಲ್ಲಿ ಮಿತ್ರಪಕ್ಷಕ್ಕೆ ಹೆಚ್ಚು ಲೀಡ್ ಸಿಕ್ಕಿದೆ. ಎನ್‌ಡಿಎ ಪಕ್ಷಕ್ಕೆ ಜನರ ಬೆಂಬಲ, ಆಶೀರ್ವಾದ ಇರುವುದು ಸ್ಪಷ್ಟವಾಗಿದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಗೆಲುವು ಖಚಿತ ಎಂದರು.
ಜನತೆ ಉತ್ತರ ಕೊಡುತ್ತಾರೆ! : ಸಾಮಾನ್ಯವಾಗಿ ಪ್ರೋಟೊಕಾಲ್ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಬೇಕು. ಆದರೆ, ರಾಜ್ಯದ ಡಿಸಿಎಂ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ ಎಂದ ನಿಖಿಲ್, 20 ಜನ ಪಿಡಿಒ ಬದಲಾವಣೆ ಮಾಡ್ತೀವಿ, ಸೈಟ್ ಕೊಡ್ತೀವಿ ಅಂತ ಆಶ್ವಾಸನೆ ಕೊಡ್ತಿದ್ದಾರೆ. ಆದರೆ, ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಗಳನ್ನೇ ಅವರು ಈಡೇರಿಸಿಲ್ಲ. ಚನ್ನಪಟ್ಟಣಕ್ಕೂ ಅದೇ ಸ್ಥಿತಿ ಬರುತ್ತದೆ. ಸರ್ಕಾರದ ಸಾಕಷ್ಟು ಮಂತ್ರಿಗಳು ಪಂಚಾಯಿತಿ ಮಟ್ಟಕ್ಕೆ ಬರುತ್ತಿದ್ದಾರೆ, ರಾಜ್ಯದಲ್ಲಿ ಚನ್ನಪಟ್ಟಣ ಉಪಚುನಾವಣೆ ಗಮನಸೆಳೆಯಲಿದೆ. ಏನೇ ಇದ್ದರೂ ಅಂತಿಮವಾಗಿ ತೀರ್ಮಾನ ಮಾಡೋದು ಕ್ಷೇತ್ರದ ಜನ ಎಂದರು.
ಕಾಂಗ್ರೆಸ್ ಷಡ್ಯಂತ್ರ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ತರಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ. ಮುಡಾ ಹಗರಣ ಮುಚ್ಚಿ ಹಾಕಲು ತಂತ್ರ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರ ರಾಜಭವನ ಚಲೋ ಹೋರಾಟದಲ್ಲಿ ಯಾವುದೇ ಹುರುಳಿಲ್ಲ ಎಂದು ನಿಖಿಲ್ ಅಭಿಪ್ರಾಯಪ್ಟರು.
ಮುಂದುವರಿದ ಪ್ರವಾಸ!: ನಿಖಿಲ್ ಕುಮಾರಸ್ವಾಮಿ ಗುರುವಾರವೂ ತಾಲೂಕು ಪ್ರವಾಸವನ್ನು ಮುಂದುವರಿಸಿದರು. ಕೋಡಂಬಳ್ಳಿ, ಜೆ.ಬ್ಯಾಡರಹಳ್ಳಿ ಹಾಗೂ ವೈ.ಹಳ್ಳಿ ಗ್ರಾಪಂನ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದರು. ಪಕ್ಷದ ಸಂಘಟನೆ ಮತ್ತು ಪಕ್ಷದ ಬಲವರ್ಧನೆ ವಿಚಾರವಾಗಿ ಚರ್ಚಿಸಿದ ಅವರು, ಉಪಚುನಾವಣೆಗೆ ಸಜ್ಜಾಗುವಂತೆಯೂ ಕಾರ್ಯಕರ್ತರಿಗೆ ಕರೆ ನೀಡಿದರು.