ವಿಜಯಪುರದ ಲಿಂ.ಸಂಗಯ್ಯ ಮುತ್ಯಾಅವರ ಪುಣ್ಯಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಚಿಣಮಗೇರಿಯ ಮಹಾಂತೇಶ್ವರ ಮಠದ ವೀರಮಹಾಂತ ಶ್ರೀಗಳು, ಅಳ್ಳಗಿಯ ಶಾಂತಲಿಂಗ ಶ್ರೀಗಳು, ನರೋಣಾ ಡಾ.ಗುರುಮಹಾಂತ ಶ್ರೀಗಳು, ಗಂಗಾಧರ ಸ್ವಾಮಿಗಳು ಮತ್ತಿತರರಿದ್ದರು.  
ಜಿಲ್ಲೆ

ಯುವಜನರಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಿರಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Bellari - Heera Nayak

ವಿಜಯಪುರ : ಯುವಜನರಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿನ ಜಮಖಂಡಿ ಬೈಪಾಸ್ ಹತ್ತಿರದ ಲಿಂ.ಸಂಗಯ್ಯ ಮುತ್ಯಾ ಅವರ ಪುಣ್ಯಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ, ದೇಶಭಕ್ತಿ ಬೆಳೆಸಬೇಕು. ಈ ಆಶ್ರಮದ ಗಂಗಾಧರ ಸ್ವಾಮಿಗಳು ಕಳೆದ ಹಲವಾರು ವರ್ಷಗಳಿಂದ ಅಂಧ, ಅನಾಥ ಮಕ್ಕಳಿಗೆ ಸಹಕಾರಿಯಾಗುವಂಥಹ ಕಾರ್ಯ ಮಾಡುತ್ತ ಇಂದು ಸಾಮೂಹಿಕ ವಿವಾಹದಂಥ ಮಹಾನ್ ಕಾರ್ಯ ಹಮ್ಮಿಕೊಂಡಿರುವದು ಶ್ಲಾಘನೀಯ ಎಂದರು.

ಚಿಣಮಗೇರಿಯ ಮಹಾಂತೇಶ್ವರ ಮಠದ ವೀರಮಹಾಂತ ಶ್ರೀಗಳು ಮಾತನಾಡಿ, ಜೀವನ ಎಂದರೆ ಗಂಡ, ಹೆಂಡತಿ, ತಂದೆ, ತಾಯಿ ಮಕ್ಕಳು ಒಂದಾಗಿ, ಚೆಂದಾಗಿ ಬಾಳುವುದಾಗಿದೆ ಎಂದರು.
ಡೋರನಹಳ್ಳಿಯ ವೀರಮಹಾಂತ ಶ್ರೀಗಳು ಮಾತನಾಡಿ, ಸತಿಪತಿಗಳು ಒಂದಾಗಿ ಜೀವನ ನಡೆಸಿ ಅತ್ತೆ, ಮಾವಂದಿರನ್ನು ತಂದೆ ತಾಯಿಗಳಂತೆ ಕಾಣಿರಿ ಎಂದರು.

ನರೋಣಾ ಡಾ.ಗುರುಮಹಾಂತ ಶ್ರೀಗಳು ಮಾತನಾಡಿ, ಶ್ರಾವಣ ಮಾಸದಲ್ಲಿ ಎಲ್ಲರೂ ಪರಶಿವನ ಧ್ಯಾನವ ಮಾಡಿರಿ ಧರ್ಮವಂತರಾಗಿ, ಪುಣ್ಯವಂತರಾಗಿ, ಲಿಂಗಪೂಜೆ, ಗುರು ಸೇವೆ, ಜಂಗಮ ಸೇವೆ ಮಾಡಿ ಗುರುವಿನ ಕೃಪೆಗೆ ಪಾತ್ರರಾಗಿ ಎಂದು ತಿಳಿಸಿದರು.

ಅಳ್ಳಗಿಯ ಶಾಂತಲಿಂಗ ಶ್ರೀಗಳು ಮಾತನಾಡಿದರು. ಆಶ್ರಮದ ದೈವಜ್ಞ ವೇ.ಗಂಗಾಧರ ಸ್ವಾಮಿಗಳು, ವೇ.ಈರಯ್ಯ ಮಠಪತಿ, ಪ್ರಸನ್ನ ಮಠ, ಡಾ.ಶಿವಕುಮಾರ ಗುಣಾರಿ, ತಹಸೀಲ್ದಾರ್ ಸಿದ್ದರಾಯ ಭೋಸಗಿ, ಹಿರಿಯ ಉಪ ನೋಂದಣಾಧಿಕಾರಿ ಭೀಮಾಶಂಕರ ಬಿರಾದಾರ, ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ, ಜಿಲ್ಲಾ ತಳವಾರ ಸಮಾಜದ ಮುಖಂಡ ಶರಣಪ್ಪ ಕಣಮೇಶ್ವರ, ಬಿಜೆಪಿ ಮುಖಂಡ ಶ್ರೀಮಂತ ನಾಗೂರ, ತಾಪಂ ಮಾಜಿ ಸದಸ್ಯ ಶಂಕರಲಿಂಗ ಕಡ್ಲೇವಾಡ, ವಿರುಪಾಕ್ಷಿ ಗಂಗನಳ್ಳಿ, ಸಿದ್ದಾರಾಮ ಹಂಗರಗಿ, ಬಸವರಾಜ ಹೀರಾಪುರ ಇದ್ದರು.