ಜಿಲ್ಲೆ

ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಳ ; ಯುವತಿಯರ ಪಾಲಿಗೆ ಶಾಪವಾದ ಕರೊನಾ

ಮಧುಗಿರಿ: ಕರೊನಾ ಸಂಕಷ್ಟದಿಂದಾಗಿ ಗ್ರಾಮೀಣ ಭಾಗದಲ್ಲಿ 18 ವರ್ಷ ತುಂಬುವ ಮೊದಲೇ ಯುವತಿಯರು ಬಾಲ್ಯವಿವಾಹ ಆಗಿರುವ ಹಲವು ಪ್ರಕರಣಗಳು ಬೆಳಕಿಗೆ ಬಾರದೆ ಮುಚ್ಚಿಹೋಗಿವೆ.

ಕರೊನಾ... ವರವೂ ಹೌದು, ಶಾಪವೂ ಹೌದು...ದುಬಾರಿ ಮದುವೆಗಳಿಗೆ ಕಡಿವಾಣ ಬಿದ್ದು, ಸರಳ ವಿವಾಹಗಳಿಗೆ ಚಾಲನೆ ದೊರೆತಿದೆ. ಇದರಿಂದ ಬಹಳಷ್ಟು ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ವಿಪರ್ಯಾಸವೆಂದರೆ 18 ವರ್ಷ ತುಂಬದ ಹೆಣ್ಣು ಮಕ್ಕಳಿಗೆ ಮಾತ್ರ ಶಾಪವಾಗಿದೆ. ಜೀವನದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಕಾಲೇಜು ಮೆಟ್ಟಿಲು ಹತ್ತಿದ್ದ ಯುವತಿಯರ ಕನಸುಗಳನ್ನು ಕರೊನಾ ನುಚ್ಚು ನೂರು ಮಾಡಿದೆ. ಸದ್ಯ ಕಾಲೇಜುಗಳು ಬಂದ್ ಆಗಿದ್ದು, ಯುವತಿಯರು ಮನೆ ಸೇರಿದ್ದಾರೆ. ಇದಲ್ಲದೆ ಉದ್ಯೋಗ ಅರಸಿ ಪಟ್ಟಣದ ಸೇರಿದ್ದ ಬಹುತೇಕ ಯುವಕರು ಹಳ್ಳಿ ಸೇರಿದ್ದು, ಬಾಲ್ಯ ವಿವಾಹಕ್ಕೆ ಅಡಿಪಾಯ ಹಾಕಿದಂತಾಗಿದೆ. ಬಹುತೇಕ ಪಾಲಕರು ಅನಕ್ಷರಸ್ಥರಾಗಿದ್ದು, ಅರಿವಿನ ಕೊರತೆಯಿಂದಾಗಿ ಬಾಲ್ಯವಿವಾಹದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.

ಬೆಳಕಿಗೆ ಬಂದದ್ದು ಹೇಗೆ: ಕರೊನಾದಿಂದಾಗಿ ಆರ್ಥಿಕ ಹೊಡೆತ, ಬದುಕು ಕಟ್ಟಿಕೊಳ್ಳುವುದೇ ಕಷ್ಟ ಎನ್ನುವಾಗ ಹೆಣ್ಣುಮಕ್ಕಳ ಓದು, ಮದುವೆ ಪಾಲಕರಿಗೆ ಹೊರೆ ಎನಿಸಿದೆ. ಹೆಣ್ಣುಮಕ್ಕಳ ಮದುವೆ ಮಾಡಿ ಮಕ್ಕಳ ಕನಸನ್ನು ಪಾಲಕರು ಚಿವುಟಿ ಹಾಕುತ್ತಿದ್ದಾರೆ. ಸಾಲಸೋಲದ ಹೊರೆಯಿಂದಾಗಿ ಪಾಲಕರಿಗೆ ಹೆಚ್ಚು ತೊಂದರೆ ಎಂಬ ಉದ್ದೇಶದಿಂದಲೋ ಏನೋ ಬಹುತೇಕ ಹೆಣ್ಣು ಮಕ್ಕಳು ಕನಸುಗಳಿಗೆ ಕಡಿವಾಣ ಹಾಕಿ ಮದುವೆಗಳಿಗೆ ಒಪ್ಪಿಗೆ ನೀಡಿ ಮೌನ ವಹಿಸುತ್ತಿರುವ ಸಂದರ್ಭಗಳೇ ಹೆಚ್ಚು. ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ಕರೊನಾ ನೋಡಲ್ ಅಧಿಕಾರಿಗಳು ಪ್ರತೀ ಗ್ರಾಮದಲ್ಲೂ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲೇ ಏಕಕಾಲಕ್ಕೆ 10ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ಬೆಳಕಿಗೆ ಬಂದಿವೆ.

86 ಬಾಲ್ಯವಿವಾಹಕ್ಕೆ ಬ್ರೇಕ್: ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಜಿಲ್ಲೆಯಾದ್ಯಂತ 86 ಬಾಲ್ಯವಿವಾಹ ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಶಸ್ವಿಯಾಗಿದೆ. ಆದರೂ, ಇಲಾಖೆ ಕಣ್ತಪ್ಪಿಸಿ 4 ಬಾಲ್ಯವಿವಾಹಗಳು ನಡೆದಿದ್ದು, ಪಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತುಮಕೂರು ನಗರದಲ್ಲೇ 8 ಬಾಲ್ಯವಿವಾಹಗಳಿಗೆ ಬ್ರೇಕ್ ಬಿದ್ದಿದೆ. 1 ಬಾಲ್ಯವಿವಾಹ ನಡೆದಿದೆ. ಗ್ರಾಮಾಂತರ ವಿಭಾಗದಲ್ಲಿ 6ನ್ನು ತಡೆಯಲಾಗಿದೆ. ಮಧುಗಿರಿ-12, ಶಿರಾ-15, ಕೊರಟಗೆರೆ-14, ತಿಪಟೂರು-11, ಪಾವಗಡ-9, ಗುಬ್ಬಿ-3 ಹಾಗೂ ಕುಣಿಗಲ್-2 ಬಾಲ್ಯವಿವಾಹ ತಡೆಹಿಡಿಯಲಾಗಿದೆ. ಮಧುಗಿರಿ-2, ಶಿರಾ-1 ಬಾಲ್ಯವಿವಾಹ ನಡೆದಿದೆ. ಇನ್ನು 2019 ಏಪ್ರಿಲ್‌ನಿಂದ ಮಾರ್ಚ್ 2020ರವರೆಗೆ 51 ಬಾಲ್ಯವಿವಾಹ ತಡೆದಿದ್ದು, 4 ಬಾಲ್ಯವಿವಾಹ ನಡೆದಿತ್ತು.

ಅರಿವಿನ ಕೊರತೆ: ಪಾಲಕರ ಬಡತನ ಹಾಗೂ ಅರಿವಿನ ಕೊರತೆಯಿಂದ ಬಾಲ್ಯವಿವಾಹಗಳು ಹೆಚ್ಚುತ್ತಿದೆ. ಯುವತಿಯರು ಬಾಲ್ಯವಿವಾಹಕ್ಕೆ ಒಳಗಾಗಿ ಭವಿಷ್ಯ ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಯಾವುದೇ ಸಂದರ್ಭದಲ್ಲೂ ಧೃತಿಗೆಡದೆ ಇಲಾಖೆಯ ಮಕ್ಕಳ ಸಹಾಯವಾಣಿ 181 ಮತ್ತು ಮಹಿಳಾ ಸಹಾಯವಾಣಿ 1098ಗೆ ಕರೆ ಮಾಡಿದರೆ ಸಂತ್ರಸ್ತ ನೆರವಿಗೆ ಧಾವಿಸಲಿದೆ ಎನ್ನುತ್ತಾರೆ ಮಧುಗಿರಿ ಸಿಡಿಪಿಒ ಅನಿತಾ.

ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶಗಳಿದ್ದು, ಬಾಲ್ಯವಿವಾಹ ಖಂಡಿಸಬೇಕು. ಪಾಲಕರು ಅಜ್ಞಾನ ತೊರೆದು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಅವರ ಭವಿಷ್ಯ ಅವರೇ ರೂಪಿಸಿಕೊಳ್ಳುತ್ತಾರೆ. ಎನ್.ಮಹಲಿಂಗೇಶ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕರೊನಾ ಹಿನ್ನೆಲೆಯಲ್ಲಿ ಕಾಲೇಜುಗಳು ಬಂದ್ ಆಗಿದ್ದು, ಹೆಣ್ಣುಮಕ್ಕಳು ಮನೆಯಲ್ಲೇ ಉಳಿಯುವಂತಾಗಿದೆ. ಪಾಲಕರು ಹೊರಗೆ ಹೋಗಿ ದುಡಿಯುವ ಸಂದರ್ಭದಲ್ಲಿ ಯುವತಿಯರಿಗೆ ರಕ್ಷಣೆ ಯಾರು ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲದೇ ಹೆಣ್ಣು ಮಕ್ಕಳು 4 ಗೋಡೆ ಮಧ್ಯೆ ಕಾಲ ಕಳೆಯುತ್ತಿದ್ದು, ಬಹುತೇಕರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇಂತಹ ಸಂದರ್ಭ ಬಾಲ್ಯ ವಿವಾಹಕ್ಕೆ ದಾರಿ ಮಾಡಿಕೊಡುತ್ತಿದೆ. ಇದನ್ನು ಹೋಗಲಾಡಿಸಲು ಎಲ್ಲ ತಾಲೂಕುಗಳಲ್ಲೂ ಕಿಶೋರಿಯರ ಹವ್ಯಾಸ ಕೂಟ ಯೋಜನೆ ರೂಪಿಸಿ ಯುವತಿಯರ ಮಾನಸಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ವಾಸಂತಿ ಉಪ್ಪಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ