ಗಣರಾಜ್ಯೋತ್ಸವ ಪಥಸಂಚಲನ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಕರ್ನಲ್ ಎನ್.ಕೆ.ಭಗ್ರಾಸ್ ಮಾತನಾಡಿದರು. ಡಾ. ಎಚ್.ಎಂ.ಶಿವಕುಮಾರ್, ವೆಂಕಟೇಶ ಕವಲಕೋಡು, ಎಂ.ಆರ್.ಸತ್ಯನಾರಾಯಣ, ಪ್ರೊ. ಬಿ.ಸಿ.ಶಶಿಧರ್ ಇತರರಿದ್ದರು.  
ಜಿಲ್ಲೆ

ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವ ಎನ್‌ಸಿಸಿ

Shivamogga - Desk - Vinayakumar D B

ಸಾಗರ: ವಿದ್ಯಾರ್ಥಿ ಜೀವನದಲ್ಲಿ ಎನ್‌ಸಿಸಿ ಒಂದು ಸುಂದರ ಅವಕಾಶ. ಎನ್‌ಸಿಸಿಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು, ಆಟೋಟಗಳಲ್ಲಿ ಆಸಕ್ತಿ ಬೆಳೆದು ಉತ್ತಮ ಆರೋಗ್ಯ, ಜೀವನಶೈಲಿ ರೂಢಿಸಿಕೊಳ್ಳಲು ಸಾಧ್ಯ ಎಂದು ಕರ್ನಲ್ ಎನ್.ಕೆ.ಭಗ್ರಾಸ್ ತಿಳಿಸಿದರು.

ನಗರದ ಎಲ್‌ಬಿ ಕಾಲೇಜು ಆವರಣದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಪಥ ಸಂಚಲನ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಎನ್‌ಸಿಸಿಯಲ್ಲಿ ಪಾಲ್ಗೊಳ್ಳುವುದು ಒಂದು ಹೆಮ್ಮೆಯ ಸಂಕೇತ. ಎಲ್‌ಬಿ ಕಾಲೇಜು ಆವರಣದಲ್ಲಿ ಎನ್‌ಸಿಸಿ ಫೈರಿಂಗ್ ರೇಂಜ್ ನಿರ್ಮಿಸಿಕೊಟ್ಟಿರುವುದು ಸಂತೋಷ ತಂದಿದೆ. ಜಿಲ್ಲೆಯಲ್ಲಿ ಒಂದು ಮಾದರಿ ಫೈರಿಂಗ್ ರೇಂಜ್ ಆಗುವ ಎಲ್ಲ ಲಕ್ಷಣ ಇಲ್ಲಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಇದು ಉಪಯೋಗವಾಗುತ್ತದೆ. ಜ.26ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆಯ್ಕೆಯಾಗಲು ಇದು ಪ್ರೇರಣೆ ಆಗಲಿದೆ ಎಂದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್, ಖಜಾಂಚಿ ವೆಂಕಟೇಶ ಕವಲಕೋಡು, ಪ್ರಮುಖರಾದ ಎಂ.ಆರ್.ಸತ್ಯನಾರಾಯಣ, ಪ್ರೊ. ಬಿ.ಸಿ.ಶಶಿಧರ್, ಎಂ.ಎ.ಸಲೀಂ, ಡಾ. ಲಕ್ಷ್ಮೀಶ್, ಎಚ್.ಡಿ.ನೂತನ್ ಇತರರಿದ್ದರು. ರಾಜ್ಯದ ವಿವಿಧ ಕಾಲೇಜುಗಳಿಂದ 450ಕ್ಕೂ ಹೆಚ್ಚು ಎನ್‌ಸಿಸಿ ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.