ಜಿಲ್ಲೆ

ಶುಕ್ರವಾರದಿಂದ ಮೆಟ್ರೋ ರೈಲು ಸೇವೆ ಯಥಾಸ್ಥಿತಿಗೆ

ಬೆಂಗಳೂರು: ಮಾಗಡಿ ರಸ್ತೆಯಿಂದ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದವರೆಗಿನ ಸಿಗ್ನಲಿಂಗ್ ವ್ಯವಸ್ಥೆ ಮಾರ್ಪಾಡು ಕಾಮಗಾರಿಗೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾ. 28ರವರೆಗೆ ಸ್ಥಗಿತಗೊಳ್ಳಬೇಕಿದ್ದ ಮೆಜೆಸ್ಟಿಕ್‌ನಿಂದ ನಾಯಂಡಹಳ್ಳಿವರೆಗೆ ಮೆಟ್ರೋ ರೈಲು ಸೇವೆಯನ್ನು ಮಾ. 26ರಿಂದಲೇ ಪುನರಾರಂಭಿಸಲಾಗುತ್ತಿದೆ.

ನಮ್ಮ ಮೆಟ್ರೋ 2ನೇ ಹಂತದ ನಾಯಂಡಹಳ್ಳಿ-ಕೆಂಗೇರಿ ಮಾರ್ಗದ ಥರ್ಡ್ ರೈಲ್ ಪರೀಕ್ಷೆ ಆರಂಭವಾಗಿದೆ. ಆ ಹಿನ್ನೆಲೆಯಲ್ಲಿ ಮಾಗಡಿ ರಸ್ತೆಯಿಂದ ನಾಯಂಡಹಳ್ಳಿ ನಿಲ್ದಾಣದವರೆಗಿನ ಸಿಗ್ನಲಿಂಗ್ ವ್ಯವಸ್ಥೆ ಮಾರ್ಪಾಡು ಮಾಡಬೇಕಿದ್ದು, ಆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅದರ ಪರಿಣಾಮ ಮಾ. 21ರಿಂದ 28ರವರೆಗೆ 8 ದಿನಗಳ ಕಾಲ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಯಂಡಹಳ್ಳಿ ಮೆಟ್ರೋ ರೈಲು ನಿಲ್ದಾಣದವರೆಗೆ ಸೇವೆಯನ್ನು ನಿಲ್ಲಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಈ ಹಿಂದೆ ತಿಳಿಸಿತ್ತು. ಅದರಂತೆ ಮಾ. 21ರಿಂದ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆದರೀಗ, ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಂಡಿರುವ ಕಾರಣ, ಮೆಜೆಸ್ಟಿಕ್‌ನಿಂದ ನಾಯಂಡಹಳ್ಳಿವರೆಗೆ ಮೆಟ್ರೋ ರೈಲು ಸೇವೆ. ಮಾ. 26ರ ಬೆಳಗ್ಗೆ 7ರಿಂದ ಆರಂಭವಾಗುತ್ತಿದೆ. ಅದರಂತೆ ಶುಕ್ರವಾರದಿಂದ ಬೈಯ್ಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ನಿಲ್ದಾಣದವರೆಗೆ ರೈಲು ಸೇವೆ ಹಿಂದಿನಂತೆ ಇರಲಿದೆ.