ಯಲ್ಲಾಪುರ: ಪಟ್ಟಣದ ನಾಯಕನಕೆರೆ ದತ್ತ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ವಿವಿಧ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆರಂಭಗೊಂಡಿತು.
ವೈದಿಕರಾದ ವಿದ್ವಾನ್ ಅಮೃತೇಶ ಹಿರೇ ಗೋಕರ್ಣ ಅವರ ಪ್ರಧಾನ ಆಚಾರ್ಯತ್ವದಲ್ಲಿ, ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ದಂಪತಿ ಯಜಮಾನತ್ವದಲ್ಲಿ 15 ವೈದಿಕರಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು.
ಗುರು ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ದೇವನಾಂದಿ, ಪುಣ್ಯಾಹವಾಚನ, ಋತ್ವಿಕ್ ವರಣನ, ಬ್ರಹ್ಮಕೂರ್ಚ ಹವನ, ಗಣಹವನ, ಶಿಲ್ಪಿ ಪೂಜೆ, ಆಲಯ ಪರಿಗ್ರಹದ ಮೂಲಕ ಮಹಾ ಸಂಕಲ್ಪ ಕೈಗೊಳ್ಳಲಾಯಿತು. ಮಧ್ಯಾಹ್ನ 3 ಗಂಟೆಗೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಮಹಾಸ್ವಾಮಿಗಳವರ ಪುರ ಪ್ರವೇಶ ಪೂರ್ಣ ಕುಂಭ ಸ್ವಾಗತ, ಚಂಡೆವಾದನದೊಂದಿಗೆ ಹುಲ್ಲೋರಮನೆ ಕ್ರಾಸ್ನಿಂದ ದತ್ತ ಮಂದಿರ ಆವರಣಕ್ಕೆ ಮೆರವಣಿಗೆಯಲ್ಲಿ ಪಾದಯಾತ್ರೆ ಮೂಲಕ ಜರುಗಿತು.
ದತ್ತ ಮಂದಿರ ಆವರಣ ಪ್ರವೇಶಿಸಿದ ಶ್ರೀಗಳು ನೂತನ ಶಿಲಾಮಯ ದತ್ತ ಮಂದಿರ, ಹಾಗೂ ಧಾರ್ವಿುಕ ಕಾರ್ಯಕ್ರಮದ ಯಾಗಶಾಲೆ, ಬಾಲಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಯಾಗಶಾಲಾ ಪ್ರವೇಶ, ಸಪ್ತಶುದ್ಧಿ, ಮಂಟಪ ಸಂಸ್ಕಾರ, ಕಲಶ ಸ್ಥಾಪನೆ, ಉದಕ ಶಾಂತಿ ಪಾರಾಯಣ, ರಾಕ್ಷೋಘ್ನ-ವಾಸ್ತು ಹವನ, ಕುಂಡ ಸಂಸ್ಕಾರ, ಅಗ್ನಿಜನನ, ಶ್ರೀ ದೇವರಿಗೆ ಸಪ್ತಾಧಿವಾಸ, ಶಯ್ಯಾ ಕಲ್ಪನೆ ಕಾರ್ಯಕ್ರಮಗಳು ಸಂಜೆ ಜರುಗಿದವು.
ಮಂದಿರದ ಉಸ್ತುವಾರಿ ಮಹೇಶ ಚಟ್ನಳ್ಳಿ, ಲೋಕಾರ್ಪಣಾ ಸಮಿತಿ ಅಧ್ಯಕ್ಷ ಪ್ರಮೋದ ಹೆಗಡೆ, ಮಠದ ಪ್ರತಿನಿಧಿ ಎಸ್.ವಿ. ಯಾಜಿ, ದತ್ತ ಮಂದಿರ ನಿರ್ಮಾಣ ಹಾಗೂ ಲೋಕಾರ್ಪಣೆ ಸಮಿತಿಯ ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಶಾಂತಾರಾಮ ಹೆಗಡೆ, ಪ್ರಶಾಂತ ಹೆಗಡೆ, ಕೆ.ಟಿ. ಭಟ್ಟ ಗುಂಡ್ಕಲ್, ಡಾ. ಕೆ.ಸಿ. ನಾಗೇಶ, ಸಿ.ಜಿ. ಹೆಗಡೆ, ನಾಗೇಶ ಯಲ್ಲಾಪುರಕರ, ವೇಣುಗೋಪಾಲ ಮದ್ಗುಣಿ, ಶ್ರೀರಂಗ ಕಟ್ಟಿ, ಪ್ರಸಾದ ಹೆಗಡೆ, ರಮೇಶ ಹೆಗಡೆ, ನರಸಿಂಹ ಗಾಂವ್ಕರ, ನಾಗರಾಜ ಮದ್ಗುಣಿ, ಶಿವಾನಂದ ಹೆಗಡೆ ಶಿಲ್ಪಿಗಳಾದ ವೆಂಕಟ್ರಮಣ ಸೂರಾಲು, ಸತೀಶ ದಾನಗೇರಿ, ವಾಸ್ತು ತಜ್ಞ ಮಹೇಶ ಮುನಿಯಂಗಳ, ಇತರರಿದ್ದರು.
ಸಂಜೆ ಮಾರುತಿ ಭಜನಾ ಮಂಡಳಿ ಬಿಸಗೋಡು ಅವರಿಂದ ಭಜನೆ, ಅನಂತ ಪದ್ಮನಾಭ ಭಟ್ಟ ಅವರಿಂದ ಕೀರ್ತನೆ, ವಿ. ಗಣಪತಿ ಭಟ್ಟ ಮೊಟ್ಟೆಗದ್ದೆ ತಂಡದಿಂದ ಗಾನ ವೈಭವ ಕಾರ್ಯಕ್ರಮ ನಡೆಯಿತು.