ಜಿಲ್ಲೆ

ತಂಬಾಕು ಉತ್ಪನ್ನ ಮಾರಾಟ ಸಲ್ಲ

ನಾಯಕನಹಟ್ಟಿ; ನಿಯಮಗಳನ್ನು ಮೀರಿ ತಂಬಾಕು ಉತ್ಪನ್ನ ಮಾರುತ್ತಿದ್ದ ಪಟ್ಟಣದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಮಾಲೀಕರಿಗೆ ದಂಡ ವಿಧಿಸಿಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಬಿ.ಎಂ.ಪ್ರಭುದೇವ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ದಾಳಿ ನಡೆಸಿದ ಬಳಿಕ ಮಾತನಾಡಿ, ಪ್ರತಿ ಕಿರಾಣಿ ಅಂಗಡಿಗಳ ವರ್ತಕರು ತಂಬಾಕು ಉತ್ಪನ್ನ ಮಾರಾಟ ಮಾಡುವ ಮುನ್ನ ತೆರಿಗೆ ಪಾವತಿಸಿದ ಉತ್ಪನ್ನಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ಆದರೆ, ಗುಟ್ಖಾ, ಬೀಡಿ, ಸಿಗರೇಟ್‌ಗಳನ್ನು ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ತಂಬಾಕಿನಿಂದಾಗುವ ದುಷ್ಪರಿಣಾಮಗಳ ಜಾಗೃತಿ ಫಲಕ ಅಂಗಡಿಗಳ ಮುಂದೆ ಪ್ರದರ್ಶಿಸಬೇಕು. ಯಾವ ವರ್ತಕರೂ ತಂಬಾಕು ಉತ್ಪನ್ನಗಳ ಮಾರಾಟದ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಪ್ರಾಥಮಿಕವಾಗಿ ಎಚ್ಚರಿಕೆ ನೀಡಿ ದಂಡ ವಿಧಿಸಲಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿಸಿದರೆ ಅಂತಹವರ ಮೇಲೆ ಮೊಕದ್ದಮೆ ದಾಖಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖ್ಯಾಧಿಕಾರಿ ಡಿ.ಭೂತಪ್ಪ ಮಾತನಾಡಿ, ಹಲವು ಬಾರಿ ದಾಳಿ ನಡೆಸಿ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆ ಬಗ್ಗೆ ಜಾಗೃತಿ ಮೂಡಿಸಿದ್ದರೂ ಸುಧಾರಣೆಯಾಗಿಲ್ಲ. ಶೀಘ್ರವೇ ಅಂತವರ ವಿರುದ್ಧ ದಂಡದ ಜತೆಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ದಾಳಿ ವೇಳೆ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ವರ್ತಕರಿಂದ 5 ಸಾವಿರಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಯಿತು.

ಜಿಲ್ಲಾ ತಂಬಾಕು ನಿಯಂತ್ರಣಕೋಶದ ಅಧಿಕಾರಿಗಳಾದ ಕೆ.ಎಂ.ತಿಪ್ಪೇಸ್ವಾಮಿ, ಆರೋಗ್ಯ ಮೇಲ್ವಿಚಾರಕ ಎಸ್.ಬಿ.ತಿಪ್ಪೇಸ್ವಾಮಿ, ಪಪಂ ಆರೋಗ್ಯ ನಿರೀಕ್ಷಕ ಟಿ.ರುದ್ರಮುನಿ, ಗುರುಪ್ರಸಾದ್, ಟಿ.ತಿಪ್ಪೇಸ್ವಾಮಿ ಇದ್ದರು.