ನಾಯಕನಹಟ್ಟಿ: ನಿತ್ಯ ಹತ್ತಾರು ಒತ್ತಡ, ಹಲವು ತರಹದ ವ್ಯಕ್ತಿಗಳ ಒಡನಾಡದಲ್ಲಿರುತ್ತಿದ್ದ ಪೊಲೀಸರಿಗೆ ಗುರುವಾರ, ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ನೇರ ಠಾಣೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯಲ್ಲಿ ಪುಳಕ ಉಂಟು ಮಾಡಿದರು.
ಕ್ಷೇತ್ರಧ್ಯಾಯನಕ್ಕೆ ಆಗಮಿಸಿದ್ದ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿದ ಪೊಲೀಸ್ ಉಪ ನಿರೀಕ್ಷಕ ಎಸ್.ರಘುನಾಥ್, ಠಾಣೆಗೆ ನಿತ್ಯ ಹಲವು ತರಹದ ವ್ಯಕ್ತಿಗಳು ಸಮಸ್ಯೆಗಳೊಂದಿಗೆ ಬರುತ್ತಾರೆ. ಆದರೆ, ಮಕ್ಕಳು ಬೆಳಗ್ಗೆಯೇ ಯಾವುದೇ ದೂರಿಲ್ಲದೆ ದಿಢೀರ್ ಭೇಟಿ ನೀಡಿದ್ದು ಖುಷಿಕೊಟ್ಟಿತು ಎಂದರು.
ಮಕ್ಕಳ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಿದ ಸಿಪಿಐ, ಸುಳ್ಳು ಹೇಳಬಾರದು, ಮನೆ, ಶಾಲೆ, ನೆರೆಹೊರೆಯಲ್ಲಿ ಉತ್ತಮ ಬಾಂಧವ್ಯ ಸಾಧಿಸಬೇಕು. ಉತ್ತಮರಾಗಿ ಬಾಳಬೇಕು. ಚೆನ್ನಾಗಿ ಓದಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಸಂಚಾರ ನಿಯಮ ಪಾಲಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡಿದರು.
ಕೆಲ ಗಂಟೆಗಳ ಕಾಲ ಮಕ್ಕಳೊಟ್ಟಿಗೆ ಮಕ್ಕಳಾಗಿದ್ದ ಪಿಎಸ್‌ಐ, ಠಾಣೆಗೆ ಬಂದು ತಮ್ಮ ಬಾಲ್ಯ ನೆನಪಿಸಿದ ವಿದ್ಯಾರ್ಥಿಗಳಿಗೆ ಶುಭಕೋರಿ ಬೀಳ್ಕೊಟ್ಟರು.
ಪೇದೆಗಳಾದ ಚನ್ನಕೇಶವ, ಮಂಜುನಾಥ, ತಿಪ್ಪೇಸ್ವಾಮಿ, ರಾಮಾಂಜನೇಯ, ತಿಲಕ್‌ಕುಮಾರ್, ಮುಖ್ಯಶಿಕ್ಷಕ ಎಚ್.ಗಂಗಣ್ಣ, ಶಿಕ್ಷಕರಿದ್ದರು.