ನಾಯಕನಹಟ್ಟಿ: ಮಾ.12ರಂದು ನಡೆಯಲಿರುವ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಪೊಲೀಸ್ ಇಲಾಖೆ ಎಲ್ಲ ರೀತಿಯಾಗಿ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.
ಪಟ್ಟಣದ ಒಳಮಠ, ಹೊರಮಠ, ಪಾದಗಟ್ಟೆ, ದೊಡ್ಡರಥ ಬೀದಿ ಮತ್ತಿತರ ಸ್ಥಳಗಳಿಗೆ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಾತ್ರೆಗೆ 4 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇರುವುದರಿಂದ ದೊಡ್ಡಮಟ್ಟದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಪಟ್ಟಣದ ಎಲ್ಲ ಮುಖ್ಯ ಸ್ಥಳಗಳು, ಚೆಕ್‌ಪೋಸ್ಟ್, ವೀಕ್ಷಣಾಗೋಪುರ, ಬಸ್ ನಿಲ್ದಾಣ, ವಾಹನ ನಿಲುಗಡೆ ಮತ್ತಿತರ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗುತ್ತದೆ. ಸರಗಳ್ಳತನದಂತಹ ಅಹಿತಕರ ಘಟನೆ ನಡೆಯದಂತೆ ಹಲವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳ ತಂಡ ರಚಿಸಲಾಗುತ್ತಿದೆ ಎಂದು ತಿಳಿಸಿದರು.
ಜಾತ್ರೆಯ ದಿನ ಚಳ್ಳಕೆರೆ ಮಾರ್ಗದಿಂದ ಬರುವ ಭಕ್ತರಿಗೆ ದೇವಾಲಯದಿಂದ ದೂರದಲ್ಲಿ ಬಸ್ ನಿಲುಗಡೆ ಮಾಡುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಎರಡು ವರ್ಷದಿಂದ ದೂರುಗಳು ಬರುತ್ತಿವೆ. ಇದಕ್ಕಾಗಿ ಲಘು ವಾಹನಗಳ ಮೂಲಕ ಭಕ್ತರನ್ನು ದೇವಾಲಯದ ಬಳಿಗೆ ಕಡಿಮೆ ದರಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗುವುದು. ಜಾತ್ರೆ ಯಶಸ್ಸಿಗಾಗಿ
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಕುಂದು ಕೊರತೆ ಆಲಿಸುತ್ತಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತಿ ಗ್ರಾಮಕ್ಕೂ ಒಬ್ಬೊಬ್ಬ ಪೊಲೀಸ್ ಪೇದೆ ನಿಯೋಜಿಸಿ ಗಸ್ತು ತಿರುಗುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಆಗಾಗ್ಗೆ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಡಿವೈಎಸ್‌ಪಿ ಮತ್ತು ವೃತ್ತ ನಿರೀಕ್ಷಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಡಿವೈಎಸ್‌ಪಿ ರೋಷನ್ ಜಮೀರ್, ವೃತ್ತ ನಿರೀಕ್ಷಕ ಆನಂದ್, ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಸ್.ವಿ. ತಿಪ್ಪೇಸ್ವಾಮಿ ರೆಡ್ಡಿ, ಟಿ. ರುದ್ರಮುನಿ, ಹಂಸವೇಣಿ, ಸಿಬ್ಬಂದಿ ಸತೀಶ್ ಇದ್ದರು.