ಜಿಲ್ಲೆ

ಅಕ್ಷರ ದಾಸೋಹಕ್ಕೆ ಬಂತು ಆನ್‌ಲೈನ್

ನಾಯಕನಹಟ್ಟಿ: ಶಿಕ್ಷಣ ಇಲಾಖೆಯಲ್ಲಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಶಿಕ್ಷಕರ ಪರಿಶ್ರಮ ಹೆಚ್ಚು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

ಅಕ್ಷರ ದಾಸೋಹದಲ್ಲಿ ಅನುಷ್ಠಾನಗೊಳ್ಳಲಿರುವ ತಂತ್ರಾಂಶದ ಕುರಿತು ಹೋಬಳಿಯ ಮುಖ್ಯಶಿಕ್ಷಕರಿಗೆ ಇಲ್ಲಿನ ವಿದ್ಯಾವಿಕಾಸ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಮತ್ತು ಶಿಕ್ಷಕರ ಸಂಪೂರ್ಣ ಮಾಹಿತಿ ಒಂದು ಕಡೆ ದೊರಕುವ ಉದ್ದೇಶದಿಂದ ಎಸ್‌ಎಟಿಎಸ್ ಎಂಬ ತಂತ್ರಾಂಶ ಜಾರಿಗೆ ತರಲಾಗಿದ್ದು, ಅದೇ ತಂತ್ರಾಂಶದಲ್ಲಿ ಅಕ್ಷರ ದಾಸೋಹ ನಿರ್ವಹಣೆಗಾಗಿ ಬೇರೆ ಪೋರ್ಟಲ್‌ನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದರು.

ಇಲಾಖೆ ಜಾರಿ ಮಾಡುವ ನೂತನ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರು ಋಣಾತ್ಮಕವಾಗಿ ಚಿಂತಿಸಬಾರದು. ಇದು ಸ್ಮಾರ್ಟ್‌ಫೋನ್ ಯುಗ. ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಎಸ್‌ಎಟಿಎಸ್ ತಂತ್ರಾಂಶದ ನಿರ್ವಹಣೆ ಮುಖ್ಯಶಿಕ್ಷಕರಿಗೆ ತಿಳಿದಿದೆ. ಇದರಲ್ಲಿಯೇ ಅಕ್ಷರ ದಾಸೋಹ ನಿರ್ವಹಣೆಗಾಗಿ ಉಪ ಪೋರ್ಟಲ್‌ನ್ನು ಇಲಾಖೆ ಆರಂಭಿಸಿದೆ. ಈ ಮುಂಚೆ ಎಸ್‌ಎಂಎಸ್ ಕಳುಹಿಸಿದ ಹಾಗೆಯೇ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಮಕ್ಕಳ, ಅಕ್ಷರ ದಾಸೋಹ ಸಿಬ್ಬಂದಿ ಹಾಜರಾತಿ, ಹಾಗೂ ದಿನಸಿ ಮಾಹಿತಿಯನ್ನು ತುಂಬಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ.ಮಂಜಣ್ಣ, ಶಿಕ್ಷಕರ ಸಂಘದ ಸಿ.ಬಿ.ಮಂಜಣ್ಣ, ಸಿ.ಬಿ.ಉಮೇಶ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಚ್.ಟಿ.ಮಂಜುನಾಥ್, ಶಶಿಧರ, ಹನುಮಂತಪ್ಪ, ಲಿಂಗರಾಜ್, ಇ.ಜಗದೀಶ್ ಇತರರಿದ್ದರು.