ನಾಯಕನಹಟ್ಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಮನುಮೈನಹಟ್ಟಿ ಕ್ರಾಸ್‌ನಿಂದ ಭಾನುವಾರ ಬೆಳಗ್ಗೆ 7ಕ್ಕೆ ಸೈಕಲ್ ತುಳಿಯುವ ಮೂಲಕ ನಾಯಕನಹಟ್ಟಿ ಪಟ್ಟಣ ಪ್ರವೇಶಿಸಿದರು.
ಒಳಮಠ, ಹಟ್ಟಿಮಲ್ಲಪ್ಪನಾಯಕ ವೃತ್ತ, ತೇರುಬೀದಿ, ಪಾದಗಟ್ಟೆ, ಕೋಲಮ್ಮನಹಳ್ಳಿ ರಸ್ತೆ, ಜಗಳೂರು ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ತೆರೆದಿರುವ ಚೆಕ್ ಪೋಸ್ಟ್‌ಗಳನ್ನು ಪರಿಶೀಲಿಸಿದರು. ಇಡೀ ಪೊಲೀಸ್ ಇಲಾಖೆ ಸಿಬ್ಬಂದಿ ಸೈಕಲ್ ಮೂಲಕವೇ ಜಾತ್ರಾ ಸಿದ್ಧತೆ ವೀಕ್ಷಿಸಿ ಗಮನಸೆಳೆಲದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ರಾಧಿಕಾ, ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಮಾಹಿತಿ ಇದೆ. ಮಾ.5ರಿಂದ ಅಧಿಕೃತವಾಗಿ ಆರಂಭವಾಗುವ ಪರಿಷೆ ಮಾ.16ರ ವರೆಗೆ ನಡೆಯುತ್ತದೆ. ಜಾತ್ರೆಯ ಕೇಂದ್ರ ಬಿಂದುವಾದ ದೊಡ್ಡ ರಥೋತ್ಸವ ಮಾ.12ರ ಮಧ್ಯಾಹ್ನ 3ಕ್ಕೆ ಜರುಗಲಿದ್ದು, ಈ ದೃಶ್ಯ ಕಣ್ತುಂಬಿಕೊಳ್ಳಲು 3 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ. ಜನಸಂದಣಿ ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಬಿಗಿ ಭದ್ರತೆಗೆ ಯೋಜನೆ ತಯಾರು: ರಥಕ್ಕೆ ಮತ್ತು ಜಾತ್ರೆಗೆ ಡಿವೈಎಸ್‌ಪಿ ಮಟ್ಟದ ಭದ್ರತೆ ಒದಗಿಸಲಾಗುವುದು. ಪಟ್ಟಣದ 7 ಸ್ಥಳಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗುವುದು ಎಂದು ತಿಳಿಸಿದರು
ಜಾತ್ರೆಯನ್ನು 18 ಸೆಕ್ಟರ್‌ಗಳಾಗಿ ವಿಂಗಡಿಸಿ ಪ್ರತಿ ಸೆಕ್ಟರ್‌ಗೂ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಸೇರಿ ಅಗತ್ಯ ಸಿಬ್ಬಂದಿ ನಿಯೋಜಿಸಲಾಗುವುದು. 10 ಸಂಚಾರ ಪೊಲೀಸ್ ದಳ, 22 ಸಹಾಯವಾಣಿ, 3 ಗಸ್ತು ಗೋಪುರ, 10 ಸ್ಕೈ ಸೆಂಟರ್, 3 ಕೆಎಸ್‌ಆರ್‌ಪಿ ತುಕಡಿ, 3 ಕ್ಯೂಆರ್‌ಟಿ ವಿಭಾಗದ ಪರಿಣಿತಿ ಸಿಬ್ಬಂದಿ, 7 ಡಿಎಆರ್ ತುಕಡಿ, 2 ಅಗ್ನಿ ಶಾಮಕದಳ, 2 ಆ್ಯಂಬುಲೆನ್ಸ್, 8 ಜಾಗೃತಿ ವಾಹನ, ಸಾರ್ವಜನಿಕರಿಗೆ ಅನುಕೂಲವಾಗಲು 3 ಕಡೆ ನಕ್ಷೆ ಪ್ರದರ್ಶನ ಫಲಕ, 1 ವಜ್ರ ವಾಹನ, 1800ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸುವ ಯೋಜನೆ ರೂಪಿಸಿದ್ದೇವೆ.
ಪಟ್ಟಣದಲ್ಲಿ ಹದ್ದಿನ ಕಣ್ಣಿಡಲು ಬಹುಕೇತ ಸ್ಥಳಗಳಲ್ಲಿ ನೂರಾರು ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಈ ಎಲ್ಲ ಯೋಜನೆಗಳು ಕಾರ್ಯರೂಪಕ್ಕೆ ತಂದು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ಬಿ.ನಂದಗಾವಿ, ಡಿವೈಎಸ್‌ಪಿ ರೋಷನ್ ಜಮೀರ್, ಸಿಪಿಐ ಆನಂದ, ಪಿಎಸ್‌ಐಗಳಾದ ಎಸ್.ರಘುನಾಥ್, ರಮೇಶ್ ಇತರರಿದ್ದರು.