ನಾಯಕನಹಟ್ಟಿ: ಮಕ್ಕಳ ಹಿತದೃಷ್ಟಿಯಿಂದ ಒಂದು ವರ್ಷಕಾಲ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಳಿಸುವುದು ಸದ್ಯದ ಕರೊನಾ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಕುದಾಪುರ ಐಐಎಸ್‌ಸಿ ಪ್ರತಿಭಾ ವಿಕಾಸ ಕೇಂದ್ರದ ಮುಖ್ಯಸ್ಥ ಪ್ರೊ.ಎಂ.ಎಸ್. ಹೆಗಡೆ ಅಭಿಪ್ರಾಯಪಟ್ಟರು.
ಸಮೀಪದ ಕುದಾಪುರದ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿಭಾ ವಿಕಾಸ ಕೇಂದ್ರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭಾರತದ ಜನಸಂಖ್ಯೆಯಲ್ಲಿ ಶೇ.30 ರಷ್ಟು ವಿದ್ಯಾರ್ಥಿಗಳಿದ್ದಾರೆ. ಇವರನ್ನು ಕರೊನಾದಿಂದ ರಕ್ಷಿಸುವುದು ಸರ್ಕಾರಕ್ಕೆ ಕಷ್ಟವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸೋಂಕುಪೀಡಿತರ ಸಂಖ್ಯೆ ಕಡಿಮೆಯಾಗುವ ಲಕ್ಷಣವಿಲ್ಲ. ಈ ಸಂಖ್ಯೆ ಹೆಚ್ಚಳಕ್ಕೆ ಲಾಕ್‌ಡೌನ್ ಸಡಿಲಿಕೆಯೇ ಕಾರಣವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತಕ್ಷಣ ಆರಂಭಿಸಿದರೆ, ದೇಶದ ಜನಸಂಖ್ಯೆಯ 30 ಕೋಟಿ ವಿದ್ಯಾರ್ಥಿಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದರು.
ಶೈಕ್ಷಣಿಕ ಚಟುವಟಿಕೆಗಳನ್ನು ಒಂದು ವರ್ಷ ಸ್ಥಗಿತಗೊಳಿಸುವುದರಿಂದ ಹಲವಾರು ಪ್ರಯೋಜನಗಳಿವೆ. ದೇಶದ 30 ಕೋಟಿ ಮಕ್ಕಳನ್ನು ಅವರ ಪಾಲಕರೇ ರಕ್ಷಿಸುತ್ತಾರೆ. ಉಳಿದ ಮೂರನೇ ಎರಡು ಜನಸಂಖ್ಯೆಯನ್ನು ಸರ್ಕಾರ ರಕ್ಷಿಸುವ ಜವಾಬ್ದಾರಿ ಹೊರಬೇಕು. ಕಾರಣ ಈ ಸಮುದಾಯವೇ ದೇಶದ ಆದಾಯಕ್ಕೆ ಅಡಿಪಾಯ ಎಂದರು.
ಕೆಲ ರಾಜ್ಯಗಳು ಆನ್‌ಲೈನ್ ಶಿಕ್ಷಣಕ್ಕೆ ಮುಂದಾಗಿವೆ. ಅರೆಬರೆಯಾಗಿ ಕಲಿಸುವುದಕ್ಕಿಂತ ಒಂದು ವರ್ಷದ ರಜೆ ಘೋಷಣೆ ಒಳಿತಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣದಿಂದ ಯಾವುದೇ ಲಾಭವಿಲ್ಲ. ಕನೆಕ್ಟಿವಿಟಿ, ಮೊಬೈಲ್, ಲ್ಯಾಪ್‌ಟಾಪ್ ಲಭ್ಯತೆ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಆನ್‌ಲೈನ್ ಶಿಕ್ಷಣ ಶೈಕ್ಷಣಿಕ ಅಸಮಾನತೆಗೆ ದಾರಿ ಮಾಡಿಕೊಡುತ್ತದೆ. ಇದು ಉಳ್ಳವರಿಗೆ ಮಾತ್ರ ಅನುಕೂಲ ಎಂದರು.
ಒಂದು ವರ್ಷ ಶೈಕ್ಷಣಿಕ ಸ್ಥಗಿತತೆ ಘೋಷಣೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಕೃಷಿ ಕಾಯಕ ಕಲಿಯಲು ಸದಾವಕಾಶವಾಗುತ್ತದೆ. ಕೃಷಿ ಕೂಡ ಒಂದು ಕಲಿಯಬೇಕಾದ ಜ್ಞಾನ ಎಂದು ತಿಳಿಸಿದರು.