ಜಗಳೂರು: ವಾಲ್ಮೀಕಿ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ರಮೇಶ್ ಕತ್ತಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಪಟ್ಟಣದಲ್ಲಿ ತಾಲೂಕು ನಾಯಕ ಸಮುದಾಯದವರು ಪ್ರತಿಭಟನೆ ನಡೆಸಿ ಶಾಸಕ ಬಿ. ದೇವೇಂದ್ರಪ್ಪ ಅವರ ಸಮ್ಮುಖದಲ್ಲಿ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳುವ ರಮೇಶ್ ಕತ್ತಿ ಅವರು ನಾಯಕ ಸಮುದಾಯದ ವಿರುದ್ಧ ಅವಹೇಳನವಾಗಿ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇನೆ. ಕೂಡಲೇ ಅವರು ಸಮುದಾಯದ ಕ್ಷಮೆ ಕೇಳಬೇಕು ಮತ್ತು ಕಾನೂನಿನಡಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಹಣ ಮತ್ತು ಅಧಿಕಾರದ ಮದದಿಂದ ವಾಲ್ಮೀಕಿ ಸಮಾಜವನ್ನು ನಿಂದಿಸಿದ್ದಾರೆ. ಇದು ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಆದ್ದರಿಂದ ಕತ್ತಿಯನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಬೇಕು ಎಂದರು.
ರಾಜ್ಯದ 70 ಪೊಲೀಸ್ ಠಾಣೆಗಳಲ್ಲಿ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಅದರಂತೆ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಪೊಲೀಸರು ಕೂಡಲೇ ಅವರನ್ನು ಬಂಧಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕೆ.ಪಿ. ಪಾಲಯ್ಯ ಮಾತನಾಡಿ, ಮಾಜಿ ಸಂಸದರಾದ ಅವರು ಎಲ್ಲರಲ್ಲೂ ಸಮಾನತೆ ಕಾಣುವ ಬದಲು ಜಾತಿ ತಾರತಮ್ಯ ಮಾಡಿದರೆ ಸಮಾಜಕ್ಕೆ ಅವರ ಕೊಡುಗೆ ಏನು? ಮೊದಲು ಇಂತಹ ಕೊಳಕು ಮನಸ್ಥಿತಿ ಬಿಟ್ಟು ಹೊರಗೆ ಬರಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದರು.
ನಾಯಕ ಸಮಾಜದ ತಾಲೂಕಾಧ್ಯಕ್ಷ ಬುಳ್ಳೇನಹಳ್ಳಿ ನಾಗರಾಜ್, ಕಾರ್ಯದರ್ಶಿ ನಾಗರಾಜ್, ಮುಖಂಡರಾದ ಟಿ. ಬಸವರಾಜ್, ಆರ್. ಓಬಳೇಶ್, ಲಿಂಗಣ್ಣನಹಳ್ಳಿ ಅಜ್ಜಪ್ಪ, ಕೃಷ್ಣಮೂರ್ತಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪಾಲಯ್ಯ, ಹನುಮಂತಪ್ಪ, ಹನುಂತಾಪುರ ರಾಜಪ್ಪ, ಕ್ಯಾಂಪ್ ರೇವಣ್ಣ, ಬಿ. ಲೋಕೇಶ್, ಕುಬೇಂದ್ರಪ್ಪ, ಶೃಂಗೇಶ್, ಚಿಕ್ಕಮ್ಮನಹಟ್ಟಿ ಮಂಜಪ್ಪ, ನಾಗರಾಜ್, ಶೇಖರಪ್ಪ, ಎಪಿಎಂಸಿ ರಾಜು, ಗುರುಮೂರ್ತಿ, ಶ್ರೀನಿವಾಸ್, ರಮೇಶ್, ಗೌರಿಪುರ ಸತ್ಯಮೂರ್ತಿ ಮತ್ತಿತರರಿದ್ದರು.