ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಸಮೀಪದ ಪೀತುಬೈಲು ತೆಂಗಮಾರು ಎಂಬಲ್ಲಿ ಸೋಮವಾರ ತಡರಾತ್ರಿ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡನ ಎನ್ಕೌಂಟರ್ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಎಎನ್ಎಫ್ನವರು ನಕ್ಸಲರೊಂದಿಗೆ ಮುಖಾಮುಖಿಯಾಗಿ ಗುಂಡಿನ ಚಕಮಕಿ ನಡೆಸಿದ್ದು, ಈ ವೇಳೆ ವಿಕ್ರಂ ಗೌಡ ಹತನಾಗಿದ್ದಾನೆ.
ನಕ್ಸಲ್ ಗುಂಪಿನಲ್ಲಿದ್ದ ಇನ್ನೂ ಸುಮಾರು ನಾಲ್ಕು ಜನರು ಓಡಿಹೋಗಿದ್ದು, ಅವರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹತನಾದ ವಿಕ್ರಂ ಗೌಡ ಕಬ್ಬಿನಾಲೆಯವನಾಗಿದ್ದು ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದ. ಕಳೆದ ವಾರ ಈದು ಪರಿಸರದಲ್ಲಿ ನಕ್ಸಲರ ಓಡಾಟದ ಬಗ್ಗೆ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಹೆಬ್ರಿ ಭಾಗದಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆದಿತ್ತು. ನಕ್ಸಲರ ತಂಡ ರೇಷನ್ ಸಂಗ್ರಹಿಸಲು ಸ್ಥಳೀಯವಾಗಿ ಬರುತ್ತಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿ ಮನೆಗೆ ಹಾಗೂ ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೂ ನಕ್ಸಲರು ಭೇಟಿ ನೀಡಿ, ಅರಣ್ಯ ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಚರ್ಚಿಸಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಮತ್ತು ಆತನ ಜತೆಗಿದ್ದ ಆರು ಮಂದಿ ಪೊಲೀಸರಿಗೆ ಶರಣಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲಿದ್ದಾರೆಂಬ ವದಂತಿ ಹರಡಿತ್ತು. ಕೇಂದ್ರ ಸರ್ಕಾರದ ಸೂಚನೆಯಂತೆ ಕೇರಳ, ಛತ್ತೀಸಗಢ, ಆಂಧ್ರದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ತೀವ್ರಗೊಂಡಿತ್ತು. ಕಾಡಂಚಿನ ಗ್ರಾಮಗಳಲ್ಲೂ ಅವರಿಗೆ ಬೆಂಬಲ ಸಿಗದೇ ಇದ್ದುದರಿಂದ ಅವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಇತ್ತೀಚೆಗೆ ಈದು ಪರಿಸರದಲ್ಲಿ, ಅದಕ್ಕೂ ಮೊದಲು ಸುಬ್ರಹ್ಮಣ್ಯ ಬಳಿಯ ಕೂಜಿಮಲೆ ಬಳಿ ನಕ್ಸಲರು ಕಾಣಿಸಿಕೊಂಡಿದ್ದರು. ಆದರೆ, ಎಎನ್ಎಫ್ ಕಾರ್ಯಾಚರಣೆಯಲ್ಲೂ ಅವರು ಪತ್ತೆಯಾಗಿರಲಿಲ್ಲ.
ವಿಕ್ರಂ ಗೌಡ ಕಳೆದ 10 ವರ್ಷದಲ್ಲಿ ಪಶ್ಚಿಮ ಘಟ್ಟದ ನಕ್ಸಲರಿಗೆ ಮುಖಂಡನಾಗಿದ್ದ ಎನ್ನಲಾಗಿದೆ. 2012ರಲ್ಲಿ ಕರ್ನಾಟಕ ಭಾಗದಲ್ಲಿ ನಕ್ಸಲ್ ಕಾರ್ಯಾಚರಣೆ ತೀವ್ರಗೊಂಡ ಬಳಿಕ ಕೇರಳದತ್ತ ಪರಾರಿಯಾಗಿದ್ದರು. ಕಳೆದ ವರ್ಷ ವಯನಾಡು ಸೇರಿದಂತೆ ಕೇರಳದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ತದನಂತರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು.
ನಕ್ಸಲ್ ಕಾರ್ಯಾಚರಣೆಯಲ್ಲಿ ಮೃತಪಟ್ಟ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಅಥನಾಗಿದ್ದ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಐದಾರು ನಕ್ಸಲ್ ತಂಡದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಎನ್ಕೌಂಟರ್ ಮುನ್ನ ಶರಣಾಗುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೆ, ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಅವರ ವಿರುದ್ಧ ಪೊಲೀಸರು ಪ್ರತಿದಾಳಿ ನಡೆಸಿದ್ದರು. ಪೊಲೀಸರ ಪ್ರತಿದಾಳಿಗೆ ಮೂರ್ನಾಲ್ಕು ನಕ್ಸಲರು ಪರಾರಿಯಾಗಿದ್ದು, ಸ್ಥಳದಲ್ಲಿ ಸಿಕ್ಕ ಮೃತದೇಹ ವಿಕ್ರಂ ಗೌಡನದ್ದೇ ಆಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.