ಆಗುಂಬೆ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ನಕ್ಸಲ್ ಬಿ.ಜಿ.ಕೃಷ್ಣಮೂರ್ತಿಯನ್ನು ಕೋರ್ಟ್‌ನಿಂದ ಕರೆದೊಯ್ಯುತ್ತಿರುವುದು. 
ಜಿಲ್ಲೆ

ನಕ್ಸಲ್ ಕೃಷ್ಣಮೂರ್ತಿ ಪೊಲೀಸ್ ಭದ್ರತೆಯಲ್ಲಿ ಕೋರ್ಟ್‌ಗೆ ಹಾಜರು

ಶಿವಮೊಗ್ಗ: ಆಗುಂಬೆ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ನಕ್ಸಲ್ ಬಿ.ಜಿ.ಕೃಷ್ಣಮೂರ್ತಿಯನ್ನು ಗುರುವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಪೊಲೀಸ್ ಭದ್ರತೆಯಲ್ಲಿ ಹಾಜರುಪಡಿಸಲಾಯಿತು.

ಕೇರಳದ ತ್ರಿಶೂರ್ ಜೈಲಿನಿಂದ ಬಾಡಿ ವಾರೆಂಟ್ ಮೇಲೆ ಕೃಷ್ಣಮೂರ್ತಿಯನ್ನು ಶಿವಮೊಗ್ಗಕ್ಕೆ ಪೊಲೀಸರು ಕರೆತಂದಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

2007ರಲ್ಲಿ ಸುರೇಶ್ ನಾಯಕ್ ಬಂಧನದ ವೇಳೆ ನೆಕ್ಕಾಡು ಕಾಡಲ್ಲಿ ಸ್ಫೋಟಕ ವಸ್ತು ಪತ್ತೆ, 2009ರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸ್ಫೋಟ ಮತ್ತು ಅರುಣ್‌ಕುಮಾರ್ ಮನೆ ಮೇಲೆ ದಾಳಿ ಪ್ರಕರಣಗಳಲ್ಲಿ ಕೃಷ್ಣಮೂರ್ತಿ ಆರೋಪಿಯಾಗಿದ್ದ. ಈ ಮೂರೂ ಪ್ರಕರಣದ ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ಆರೋಪಿ ಹೇಳಿಕೆಗೆ ಕರೆತರಲಾಗಿತ್ತು.

ಈ ವೇಳೆ ನ್ಯಾಯಾಧೀಶರು ಸ್ಫೋಟಕ ಹಾಗೂ ಗನ್‌ಗಳ ಬಳಕೆ ಕುರಿತು ಪ್ರಶ್ನಿಸಿದ್ದು, ಅವುಗಳನ್ನು ಬಿ.ಜಿ.ಕೃಷ್ಣಮೂರ್ತಿ ಅಲ್ಲಗಳೆದಿದ್ದರು ಎನ್ನಲಾಗಿದೆ. ಅಲ್ಲದೆ ಜೈಲಿನಲ್ಲಿ ಕನ್ನಡ ಪುಸ್ತಕ ಓದಲು ಕೋರ್ಟ್‌ನ ಅನುಮತಿ ಕೇಳಲಾಯಿತು. ತ್ರಿಶೂರಿನ ವಿವೂರ್ ಜೈಲಿನಲ್ಲಿರುವ ಕನ್ನಡ ಪುಸ್ತಕ ತೆಗೆದುಕೊಂಡರೆ ಕೇರಳ ಜೈಲಿನಲ್ಲಿ ಅನುಮತಿಯಿಲ್ಲ. ಹಾಗಾಗಿ ವಕೀಲ ಶ್ರೀಪಾಲ್ ಕೋರಿಕೆ ಮಂಡಿಸಿದರು. ಭದ್ರತಾ ವಿಚಾರದಲ್ಲಿ ಜೈಲಿನವರು ಬೇಡ ಎಂಬ ವಾದವನ್ನು ಎಪಿಪಿ ಮಂಡಿಸಿದರೂ ಕೊನೆಯಲ್ಲಿ ಪುಸ್ತಕಗಳ ಓದಿಗೆ ಅನುಮತಿ ನೀಡಲಾಯಿತು.