ಜಿಲ್ಲೆ

ಚೇರು ಪ್ರದೇಶಕ್ಕೆ ನಕ್ಸಲರ ತಂಡ ಬೇಟಿ!

Mangaluru - Nishantha Narayana

ಪುತ್ತೂರು: ಕಡಬ ತಾಲೂಕಿನ ಕೊಂಬಾರು ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಗುರುವಾರ ರಾತ್ರಿ ಆರು ಮಂದಿ ನಕ್ಸಲರ ತಂಡ ಆಗಮಿಸಿ ಊಟ ಮಾಡಿ ದಿನಸಿ ಸಾಮಾಗ್ರಿಗಳನ್ನು ಮನೆಯವರಿಂದ ಪಡೆದು ತೆರಳಿದ್ದಾರೆ.

ಮೋಸ್ಟ್ ವಾಂಟೆಡ್ ನಕ್ಸಲೈಟ್ ವಿಕ್ರಂ ಗೌಡ, ಲತಾ ಮುಂಡುಗಾರು ಹಾಗೂ ಇತರರು ಇದ್ದ ಬಗ್ಗೆ ನಕ್ಸಲ್ ನಿಗ್ರಹ ದಳ ವಿಚಾರಣೆ ವೇಳೆಗೆ ದೃಢ ಪಟ್ಟಿದೆ. ಗುರುವಾರ ರಾತ್ರಿ ೭ ಗಂಟೆ ಸುಮಾರಿಗೆ ಮನೆಗೆ ಆಗಮಿಸಿದ ತಂಡ ಸುಮಾರು ೯ ಗಂಟೆವರೆಗೆ ಮನೆಯಲ್ಲೇ ಇದ್ದು, ಊಟ ಮುಗಿಸಿ, ಹೆಚ್ಚುವರಿ ದಿನಸಿ ಸಾಮಾಗ್ರಿಯನ್ನು ಪಡೆದು ತೆರಳಿದ್ದಾರೆ. ಈ ವಿಚಾರ ಶುಕ್ರವಾರ ಸಾಯಂಕಾಲ ಬೆಳಕಿಗೆ ಬಂದಿದೆ.

ಸುಮಾರು ಎರಡು ಗಂಟೆಗಳ ಕಾಲ ಇದ್ದ ನಕ್ಸಲರು ಮನೆಯವರ ಜೆತೆಗೆ ಏನೆಲ್ಲಾ ಮಾತು ಕತೆ ನಡೆಸಿದ್ದಾರೆಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸುಬ್ರಮಣ್ಯ ಸಮೀಪದ ಐನೆಕಿದು ತೋಟದಮೂಲೆಯಲ್ಲಿ ಪತ್ತೆಯಾಗಿದ್ದ ಬಳಿಕ ಮರೆಯಾಗಿದ್ದ ನಕ್ಸಲರು ಈಗ ಚೇರು ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ.

ಎ.ಎಸ್.ಎಫ್. ತಂಡ ಮನೆಗೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಈ ಭಾಗದಲ್ಲಿ ಕೂಂಬಿಂಗ್ ಪ್ರಾರಂಭಿಸಿದ್ದಾರೆ. ೨೦೧೨ರಲ್ಲಿ ನಡೆದ ಶೂಟೌಟ್ ಪ್ರಕರಣ ನಡೆದ ಭಾಗ ಇಲ್ಲಿಗೆ ಸಮೀಪದಲ್ಲಿದೆ ಎಂಬುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.