ಕಾರವಾರ: ಕೆಲ ನೌಕಾ Navy ಸಿಬ್ಬಂದಿ, ಸ್ಥಳೀಯರು, ಮೀನುಗಾರರ ಮೇಲೆ ಗೂಂಡಾ ವರ್ತನೆ ಮಾಡುತ್ತಿದ್ದು, ಅವರ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದು ಎಂಎಲ್ ಸಿ ಗಣಪತಿ ಉಳ್ವೇಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು,ಕಾರವಾರದಲ್ಲಿ ನೌಕಾಸೇನೆಯ ಸಿಬ್ಬಂದಿ ದೌರ್ಜನ್ಯ ಮಿತಿ ಮೀರಿದೆ. ಸಮುದ್ರದಲ್ಲಿ ಮೀನುಗಾರರು ಬಲೆ ಹಾಕಿದರೆ, ಕೆಲ ಬಾರಿ ನೌಕಾ ವಲಯದಲ್ಲಿ ತೇಲಿ ಹೋಗಬಹುದು. ಆದರೆ, ಅವರು ಅಂಥ ಸಂದರ್ಭದಲ್ಲಿ ಶತ್ರುಗಳಂತೆ ಮೀನುಗಾರರ ಮೇಲೆ ಹಲ್ಲೆ ಮಾಡುತ್ತಾರೆ. ಬಲೆ ತುಂಡಿಸುತ್ತಾರೆ.
ಇತ್ತೀಚೆಗೆ ಮುದಗಾದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ Navy ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಇಂಥ ಘಟನೆಗಳ ಸಂಬಂಧ ಚರ್ಚಿಸಲು ನೌಕಾ ಹಿರಿಯ ಅಧಿಕಾರಿಗಳು ಸಾರ್ವಜನಿಕರ ಜತೆ ಸಭೆ ನಡೆಸಬೇಕು. ಇಲ್ಲದೇ ಇದ್ದಲ್ಲಿ ಇಡೀ ಕರಾವಳಿಯ ಮೀನುಗಾರರು ಸೇರಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ವಕೀಲ, ಬಿಜೆಪಿ ಮುಖಂಡ ನಾಗರಾಜ ನಾಯಕ ಮಾತನಾಡಿ, ಭಾರತೀಯ ನೌಕಾಸೇನೆಯ ಬಗ್ಗೆ ನಮಗೆ ಅಪಾರ ಗೌರವ ಇದೆ. ಆದರೆ, ಒಂದಿಬ್ಬರು ಪುಂಡರು ಹದ್ದು ಮೀರಿ ವರ್ತಿಸುತ್ತಿದ್ದಾರೆ. ನೌಕಾ Navy ಅಧಿಕಾರಿಗಳು ಭಾರತೀಯ ಕಾನೂನಿಗೆ ಅತೀತರಲ್ಲ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನೌಕಾಸೇನೆಯ ಹಿರಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಹೊರಗಡೆ ಹೇಗೆ ನಡೆದುಕೊಳ್ಳಬೇಕು ಎಂಬ ಸೂಚನೆ ನೀಡಬೇಕು.
ಜ.12 ರಲ್ಲಿ ನೌಕಾ ಸಿಬ್ಬಂದಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಅಯ್ಯಪ್ಪ ಮಾಲಾಧಾರಿಯೊಬ್ಬನ ಕಾಲು ಮುರಿದಿದಿದೆ.ಆದರೆ, ವಿಪರ್ಯಾಸ ಎಂದರೆ, ಪೊಲೀಸ್ ಇಲಾಖೆ ದೌರ್ಜನ್ಯ ಮಾಡಿದವರ ಮೇಲೆಯೇ ಕಠಿಣ ಸೆಕ್ಷನ್‌ಗಳನ್ನು ಹಾಕಿ ಪ್ರಕರಣ ದಾಖಲಿಸಿದೆ.ನೌಕಾ ಅಧಿಕಾರಿಗಳ ಮೇಲೆ ದುರ್ಬಲ ಸೆಕ್ಷನ್‌ಗಳನ್ನು ಹಾಕಲಾಗಿದೆ.
ಅಯ್ಯಪ್ಪ ಮಾಲಾಧಾರಿಗಳು ಈ ಘಟನೆಯ ನಂತರವೂ ತಮ್ಮ ವೃತ ಸಮಾಪ್ತಿ ಮಾಡುವ ಸಲುವಾಗಿ ಶಬರೀಮಲೆಗೆ ಹೋಗಿದ್ದಾರೆ. ಅವರು ಬಂದ ನಂತರ ಸ್ಥಳ ಮಹಜರು ಮಾಡಿ, ನೌಕಾ Navy ಅಧಿಕಾರಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಇಡೀ ಕರಾವಳಿ ಪ್ರತಿಭಟನೆ ಮಾಡಲಿದ್ದೇವೆ ಎಂದರು. ಇಷ್ಟೆಲ್ಲ ಆದ ಮೇಲೂ ನೌಕಾಸೇನೆ ತಮ್ಮ ಸಿಬ್ಬಂದಿ ಏನೂ ಮಾಡಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.
ಮುದಗಾ ಭಾಗದ ಮೀನುಗಾರರಾದ ಉಮಾಕಾಂತ ಹರಿಕಂತ್ರ, ತೋಕು ಹರಿಕಂತ್ರ, ಪ್ರಶಾಂತ ಕೊಡಾರಕರ್, ಮಧು ದುರ್ಗೇಕರ್, ವಾಸುದೇವ ತಾಂಡೇಲ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ: https://www.vijayavani.net/kpsc-exame