ಜಿಲ್ಲೆ

ವನದುರ್ಗಾ ದೇವಿ ಸನ್ನಿಧಿ ನವರಾತ್ರಿ ಪೂಜಾ ಮಹೋತ್ಸವ

ಸೌಮ್ಯ ಆರ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಶ್ರೀ ವನದುರ್ಗಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು. ಪ್ರಧಾನ ಅರ್ಚಕ ಶ್ರೀಕರ ಉಪಾಧ್ಯಾಯರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳ ಮೂಲಕ ದೇವಳದಲ್ಲಿ ಪೂಜೆ ನೆರವೇರಿತು. ಪ್ರತಿದಿನ ದೇವಿಗೆ ವಿವಿಧ ಅಲಂಕಾರದೊಂದಿಗೆ ಮಹಾಪೂಜೆ, ದುರ್ಗಾಪೂಜೆ, ಹೂವಿನ ಪೂಜೆ ಮತ್ತು ರಂಗಪೂಜೆ ನಡೆಯಿತು. ನವರಾತ್ರಿಯ 9 ದಿನಗಳಲ್ಲಿ ಸಹಸ್ರಾರು ಭಕ್ತರು ಶ್ರೀ ದೇವಿ ಸನ್ನಿಧಿಯಲ್ಲಿ ವಾಹನಪೂಜೆ ಮಾಡಿಸಿದರು. ಪುರೋಹಿತ ಚೇತನ ಶಾಸ್ತ್ರಿ ವಾಹನ ಪೂಜೆ ನೆರವೇರಿಸಿದರು.

ಉತ್ಸವದ ಅಂಗವಾಗಿ ಎಲ್ಲ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಪ್ರತಿ ದಿನ ವಿವಿಧ ಭಜನಾ ತಂಡಗಳಿಂದ ಭಜನೆ ಮತ್ತು ಕುಣಿತ ಭಜನೆ ನೆರವೇರಿತು. ರಾತ್ರಿ ಮಹಾಪೂಜೆಯ ಬಳಿಕ ಭೋಜನ ಪ್ರಸಾದ ವಿತರಿಸಲಾಯಿತು.

ಸಾಂಸ್ಕೃತಿಕ ಸಂಭ್ರಮ: ಡ್ಯಾನ್ಸ್ ಬೀಟ್ ಬೆಳ್ಳಾರೆ ಅವರಿಂದ ನೃತ್ಯ ಸಂಭ್ರಮ, ಯಕ್ಷಬಿಂದು ಉಜಿರೆ ತಂಡದಿಂದ ಹರಿದರ್ಶನ ಹಾಗೂ ಜಾಂಭವತಿ ಕಲ್ಯಾಣ ಯಕ್ಷಗಾನ, ಬೃಂದಾವನ ನಾಟ್ಯಾಲಯ ಪುತ್ತೂರು ಅವರಿಂದ ಭರತನಾಟ್ಯ, ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ನೃತ್ಯೋಪಾಸನಾ ಕಲಾಕೇಂದ್ರ ಸುಬ್ರಹ್ಮಣ್ಯ ಅವರಿಂದ ನೃತ್ಯೋಹಂ, ಕಿಶೋರ್ ಡಿ.ಶೆಟ್ಟಿ ತಂಡದಿಂದ ಕಟಿಲ್ದಪ್ಪೆ ಉಳ್ಳಾಳ್ತಿ ತುಳು ಪೌರಾಣಿಕ ನಾಟಕ, ಸಾನ್ವಿ ಮೆಲೋಡಿಸ್ ಕಾಸರಗೋಡು ಇವರಿಂದ ಭಕ್ತಿ ರಸಮಂಜರಿ, ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತುಳಸಿ ಜಲಂಧರ ಯಕ್ಷಗಾನ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹಿತ ಯಕ್ಷಗಾನ ನಾಟ್ಯ ಕಲಾಕೇಂದ್ರದಿಂದ ಪುಣ್ಯಕೋಟಿ-ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನ, ಕಲಾವಿದ ಕೆ.ಯಜ್ಞೇಶ್ ಆಚಾರ್ಯ ಮತ್ತು ಬಳಗದಿಂದ ಭಕ್ತಿ ಸಂಗೀತ, ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದಿಂದ ಭಕ್ತಿ ಗಾಯನ ನೆರವೇರಿತು. ಮಠದ ದಿವಾನ ಸುದರ್ಶನ ಜೋಯಿಸ, ಸೇರಿದಂತೆ ಪುರೋಹಿತರು ಮತ್ತು ಭಕ್ತರು ಉಪಸ್ಥಿತರಿದ್ದರು.