ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯ ವಿವಿಧ ದೇವಿ ಮಂದಿರಗಳಲ್ಲಿ ನವರಾತ್ರಿ ಆಚರಣೆ ಸಂಭ್ರಮದಿಂದ ಸಾಗಿದೆ. ಉಡುಪಿ ಕನ್ನರ್ಪಾಡಿಯಲ್ಲಿರುವ ಜಯದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ (ಸೆ.25) ಶರನ್ನವರಾತ್ರಿ ನಿಮಿತ್ತ ಭಕ್ತರಿಂದ ಒಟ್ಟು ನಾಲ್ಕು ಚಂಡಿಕಾಯಾಗ ಸೇವೆ ನಡೆಯಿತು.
ದೇವಿಯನ್ನು ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕರಿಸಿ ಮಹಾಪೂಜೆ ಹಾಗೂ ವೇದಮೂರ್ತಿ ಶ್ರೀಶ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ದೇಗುಲಕ್ಕೆ ಆಗಮಿಸುವ ಭಕ್ತರಿಗೆ ನಿತ್ಯವೂ ರವಿಕೆ ಕಣ, ಬಳೆ, ಫಲ ಸಹಿತ ಪ್ರಸಾದ ವಿತರಿಸಲಾಗುತ್ತಿದೆ. ಸರತಿ ಸಾಲಿನಲ್ಲಿ ದೇವಿ ದರ್ಶನ ಮಾಡಿದ ಬಳಿಕ ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
ಗುರುವಾರ ರಾತ್ರಿ ಕಲ್ಪೋಕ್ತ ಪೂಜೆ, ರಾತ್ರಿಯ ಮಹಾಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ ಹಾಗೂ ರಂಗ ಪೂಜೆ ನೆರವೇರಿತು.