ಜಿಲ್ಲೆ

ಭಗವತೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ನವರಾತ್ರಿ ಸಂಭ್ರಮ

ಪುತ್ತೂರು ದೇವಳದಲ್ಲಿ ನಿತ್ಯ ಧಾರ್ಮಿಕ ಸೇವೆ

ವೀಣಾಪಾಣಿ ಸರಸ್ವತಿ ಅಲಂಕಾರದಲ್ಲಿ ದೇವಿ

ಭಕ್ತರಿಂದ ಚಂಡಿಕಾ ಯಾಗ, ಯಕ್ಷಗಾನ ಪ್ರದರ್ಶನ

ವಿಜಯವಾಣಿ ಸುದ್ದಿಜಾಲ ಉಡುಪಿ

ತಾಲೂಕಿನ ಪುತ್ತೂರು ಗ್ರಾಮದಲ್ಲಿರುವ ಭಗವತೀ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ನಿಮಿತ್ತ ನಿತ್ಯವೂ ದೇವಿಗೆ ವಿಶೇಷ ಅಲಂಕಾರ, ಪೂಜಾ ಸೇವೆ ನಡೆದಿದೆ. ದಸರಾದ 9ನೇ ದಿನವಾದ ಮಂಗಳವಾರ (ಸೆ.30)ದಂದು ದೇವಿಯನ್ನು ವೀಣಾಪಾಣಿ ಸರಸ್ವತಿ ಅಲಂಕಾರದೊಂದಿಗೆ ಪೂಜಿಸಲಾಯಿತು.

ನವರಾತ್ರಿಯ ಆರಂಭದ ದಿನ ಕದಿರು ಕಟ್ಟುವುದು ಸೇರಿದಂತೆ ಕಲ್ಪೋಕ್ತ ಪೂಜೆ, ಚಂಡಿಕಾಯಾಗ, ದೀಪಾರಾಧನೆ, ಹೂವಿನ ಪೂಜೆ ನಡೆದವು. ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ದೇವಿಗೆ ಕುಂಕುಮಾರ್ಚನೆ, ಹಾಲು ಪಾಯಸ, ಹರಿವಾಣ ನೈವೇದ್ಯ, ಸಪ್ತಶತೀ ಪಾರಾಯಣ ಸೇರಿದಂತೆ ವಿವಿಧ ಸೇವೆ ಸಲ್ಲಿಸಿದರು. ಅನೇಕ ಭಕ್ತರು ನವರಾತ್ರಿಯ ಸಂದರ್ಭದಲ್ಲಿ ಹರಕೆ ತೀರಿಸಿಕೊಂಡರು. ಆಗಮಿಸಿದ ಭಕ್ತರಿಗೆಲ್ಲ ಅನ್ನ ಸಂತರ್ಪಣೆ ಮಾಡಲಾಯಿತು.

ದೇಗುಲದ ತಂತ್ರಿ ಶ್ರೀನಿವಾಸ ತಂತ್ರಿ ಮಾರ್ಗದರ್ಶನದಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳು ನಡೆದವು. ಆನುವಂಶೀಕ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ಭಟ್​, ಪರ್ಯಾಯ ಅರ್ಚಕ ಪಿ. ವೇಣುಗೋಪಾಲ ಭಟ್​, ಪವಿತ್ರಪಾಣಿ ಪಿ.ಎನ್​. ಜನಾರ್ದನ ಭಟ್​, ದೊಡ್ಡಮನೆ ವಸಂತ ಎನ್​. ಹೆಗ್ಡೆ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಪ್ರತಿದಿನ ಯಕ್ಷಗಾನ ಪ್ರದರ್ಶನ

ನವರಾತ್ರಿ ನಿಮಿತ್ತ ಪ್ರತಿದಿನ ಸಂಜೆ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆದವು. ಪುತ್ತೂರಿನ ಭಗವತೀ ಯಕ್ಷ ಕಲಾ ಬಳಗ ಸೇರಿದಂತೆ ವಿವಿಧ ಯಕ್ಷಕಲಾ ಮೇಳಗಳಿಂದ ಬಡಗುತಿಟ್ಟು ಹಾಗೂ ತೆಂಕುತಿಟ್ಟು ಪ್ರಕಾರದ ಯಕ್ಷಗಾನ ನಡೆದವು. ಅ.1ರಂದು ಕನಕಾಂಗಿ ಕಲ್ಯಾಣ ಯಕ್ಷಗಾನ ನಡೆಯಲಿದೆ. ಅ.2ರಂದು ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದ್ದು, ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.