ಚಾಮರಾಜನಗರ ತಾಲೂಕಿನ ಕೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಕೆರೆಹಳ್ಳಿ ನವೀನ್ ಅವರನ್ನು ನಿರ್ದೇಶಕರು ಸನ್ಮಾನಿಸಿದರು.  
ಜಿಲ್ಲೆ

ಹ್ಯಾಟ್ರಿಕ್ ಸಾಧನೆ ಮಾಡಿದ ಕೆರೆಹಳ್ಳಿ ನವೀನ್

ನಾಗೇಶ ಎಸ್

ಚಾಮರಾಜನಗರ: ತಾಲೂಕಿನ ಕೆರೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನವೀನ್ ಮತ್ತು ಉಪಾಧ್ಯಕ್ಷರಾಗಿ ಮದೇವಯ್ಯ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನವೀನ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ನೋಂದಣಾಧಿಕಾರಿ ಸುರೇಶ್ ಆಯ್ಕೆಯನ್ನು ೋಷಣೆ ಮಾಡಿದರು.

ಸತತ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೆರೆಹಳ್ಳಿ ನವೀನ್ ಮೂರನೇ ಬಾರಿಯೂ ಅಧಿಕಾರ ಹಿಡಿಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಲ್ಲಿಯವರೆಗೂ ಸಂಘ ಅಂಚೆ ಕಚೇರಿ ರೀತಿಯಲ್ಲಿ ಕೆಲಸ ಮಾಡುತ್ತಿತ್ತು. ಮುಂದಿನ ದಿನಗಳಲ್ಲಿ ಬ್ಯಾಂಕ್ ಆಗಿ ಪರಿವರ್ತನೆ ಮಾಡಬೇಕು. ಏಪ್ರಿಲ್ 1ರಿಂದ ವಿಶೇಷವಾಗಿ ಸರ್ಕಾರವೇ ಬ್ಯಾಂಕ್ ಆಗಿ ಬದಲಾಯಿಸುತ್ತಿದೆ. ಇನ್ನು ಮುಂದೆ ಪಿಗ್ಮಿ ಸಂಗ್ರಹ, ವಾಹನಗಳಿಗೆ ಸಾಲ ನೀಡುವಿಕೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಮಾಡಬೇಕೆಂದುಕೊಂಡಿದ್ದೇವೆ ಎಂದರು.

ಸಂಘದ ಕಚೇರಿಗೆ ನೂತನ ಕಟ್ಟಡವಿದ್ದು, ಮುಂದಿನ ದಿನಗಳಲ್ಲಿ ಉನ್ನತೀಕರಿಸಬೇಕು. ಸಂಘದಲ್ಲಿ ರೈತರಿಗೆ ಗೊಬ್ಬರ ಮಾರಾಟದ ಅಂಗಡಿ, ಔಷಧ ಅಂಗಡಿ, ದಿನಸಿ ಅಂಗಡಿಗಳನ್ನು ಮಾಡಬೇಕು ಎಂದುಕೊಂಡಿದ್ದೇವೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಂಕರ್ ಮತ್ತು ಎಲ್ಲ ನಿರ್ದೇಶಕರು ಇದ್ದರು.