ಜಿಲ್ಲೆ

ಇಂದಿನಿಂದ ನವರಾತ್ರಿ ಆಚರಣೆ

Dakshina Kannada

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಚಂಡಿಕಾ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅ.17ರಿಂದ 25ರವರೆಗೆ ನಡೆಯಲಿದೆ. ಅ.20ರಂದು ಬೆಳಗ್ಗೆ 8.30ಕ್ಕೆ ಚಂಡಿಕಾಯಾಗ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12.30ಕ್ಕೆ ದೇವಿಗೆ ವಿಶೇಷ ಮಹಾಪೂಜೆ ನಡೆಯಲಿದೆ. 25ರ ವಿಜಯದಶಮಿಯಂದು ಬೆಳಗ್ಗೆ 8.30ಕ್ಕೆ ತೆನೆಪೂಜೆ, ವಿತರಣೆ, ಬಳಿಕ ವಿದ್ಯಾರಂಭ ನಡೆಯಲಿದೆ.

ಜ್ಯೋತಿಗುಡ್ಡೆ ದೇವಳ: ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.17ರಿಂದ 24ರವರೆಗೆ ನಡೆಯಲಿದೆ. 17ರಂದು ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮ, ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ, ರಾತ್ರಿ 9.30ಕ್ಕೆ ಯಕ್ಷಜ್ಯೋತಿ ಜ್ಯೋತಿಗುಡ್ಡೆ ಸಂಯೋಜನೆಯಲ್ಲಿ ವೀರ ಅಭಿಮನ್ಯು ಯಕ್ಷಗಾನ ನಡೆಯಲಿದೆ. 18ರಂದು ಸೂರ್ಯೋದಯದಿಂದ ಅ.19ರ ಸೂರ್ಯೋದಯದವರೆಗೆ ಏಕಾಹ ಭಜನೆ ನಡೆಯಲಿದೆ. ಪ್ರತಿದಿನ ಸಂಜೆ 6ರಿಂದ ರಾತ್ರಿ 12ರವರೆಗೆ ಸಂಧ್ಯಾ ಭಜನೆ ನಡೆಯಲಿದೆ. 21ರಂದು ಸಂಜೆ 5.30ಕ್ಕೆ ಇಂದ್ರಜಿತು ಕಾಳಗ, 22ರಂದು ಅತಿಕಾಯ ಮೋಕ್ಷ, 23ರಂದು ಭೀಷ್ಮ ವಿಜಯ ತಾಳಮದ್ದಳೆ ನಡೆಯಲಿದೆ. 25ರಂದು ಶ್ರೀ ದೇವರಿಗೆ ಸೀಯಾಳಾಭಿಷೇಕ ನೆರವೇರಲಿದೆ.

ಅನ್ನಪೂರ್ಣೇಶ್ವರಿ ದೇವಳ: ಬಿ.ಸಿ.ರೋಡಿನ ಪೊಲೀಸ್‌ಲೇನ್‌ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಅ.17ರಿಂದ 25ರವರೆಗೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 8ರಿಂದ ಕೀಕಾಂಗೋಡು ಅರವತ್ ಶ್ರೀ ದಾಮೋದರ ತಂತ್ರಿಗಳ ಮಾರ್ಗದರ್ಶನ ಹಾಗೂ ಅರ್ಚಕ ವರ್ಗದ ನೇತೃತ್ವದಲ್ಲಿ ಚಂಡಿಕಾ ಹೋಮ ಮತ್ತು ನವರಾತ್ರಿ ಮಹೋತ್ಸವ ನಡೆಯಲಿದೆ. 20ರಂದು ಲಲಿತಾ ಪಂಚಮಿ ಅಂಗವಾಗಿ ಹೊಸ ಅಕ್ಕಿ ನೈವೇದ್ಯ, ವಿಶೇಷ ನಾಗಾರಾಧನೆ ನಡೆಯಲಿದೆ.

ಕಕ್ಯಬೀಡು ದೇವಳ: ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ಅ.17ರಿಂದ 25ರವರೆಗೆ ನವರಾತ್ರಿ ಪೂಜೋತ್ಸವ ಜರುಗಲಿದೆ. ಪ್ರತಿದಿನ ರಾತ್ರಿ ಮಹಾಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ಸಾರ್ವಜನಿಕ ಆಯುಧ ಪೂಜೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೃತ್ಯುಂಜಯ ಹೋಮ: ಬಂಟ್ವಾಳ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯ ದೋಷ ನಿವಾರಣೆ ಮತ್ತು ಫಲ ಪ್ರಾಪ್ತಿಗಾಗಿ ಜಿಪಂ ಸದಸ್ಯ ತುಂಗಪ್ಪ ಬಂಗೇರ ನೇತೃತ್ವದಲ್ಲಿ ಉಡುಪಿ ಚಂದ್ರ ಮೌಳೀಶ್ವರ ದೇವಸ್ಥಾನ ಅರ್ಚಕ ಮನೋಹರ ತಂತ್ರಿ ಮತ್ತು ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನದ ಅರ್ಚಕ ರಘುಪತಿ ಭಟ್ ಅವರ ವೈದಿಕ ವಿಧಿವಿಧಾನಗಳೊಂದಿಗೆ ಮಹಾಮೃತ್ಯುಂಜಯ ಹೋಮ ಅ.19ರಂದು ನಡೆಯಲಿದೆ.

21ರಂದು ಶ್ರೀದೇವತಾ ಸಮಿತಿ ಶಾರದಾ ಮಹೋತ್ಸವ

ವಿಟ್ಲ: ಶ್ರೀ ದೇವತಾ ಸಮಿತಿಯ 49ನೇ ವರ್ಷದ ಶಾರದಾ ಮಹೋತ್ಸವ ಅ.21ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಬೆಳಗ್ಗೆ 7ಕ್ಕೆ ಶ್ರೀ ಮಹಾಗಣಪತಿ ಹವನ, 9ಕ್ಕೆ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, 9.45ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ, 11ಕ್ಕೆ ಅಕ್ಷರಾಭ್ಯಾಸ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ಪಂಚಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ನಗರ ಭಜನೆ, ಮಹಾಮಂಗಳಾರತಿ ವಿಸರ್ಜನಾ ಪೂಜೆ ನಡೆಯಲಿದೆ. ಕೆ.ಕೃಷ್ಣಯ್ಯ ವಿಟ್ಲ ಅಧ್ಯಕ್ಷತೆ ವಹಿಸಲಿದ್ದು, ದೇವತಾ ಸಮಿತಿ ಅಧ್ಯಕ್ಷ ಎಂ.ರಾಧಾಕೃಷ್ಣ ನಾಯಕ್ ಅವರಿಂದ ಧ್ವಜಾರೋಹಣ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ವಿ.ಕರಿಯಪ್ಪ ಮೂಲ್ಯ ಕಟ್ಟೆ ಅವರಿಂದ ದೀಪ ಪ್ರಜ್ವಲನೆ ನೆರವೇರಲಿದೆ. ವಿಟ್ಲ ವಲಯ ಗ್ಯಾರೇಜು ಮಾಲೀಕರ ಸಂಘ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಆರ್.ಎಸ್.ವಿಟ್ಲ, ಬಿ.ಪುಷ್ಪಲತಾ ವಿಟ್ಲ ಭಾಗವಹಿಸಲಿದ್ದಾರೆ.

ಮಾಣಿಲದಲ್ಲಿ ಶರನ್ನವರಾತ್ರಿ ಮಹೋತ್ಸವ

ವಿಟ್ಲ: ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ 21ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿನಯನಕೃಷ್ಣ ಭಟ್ ಜಾಲ್ಸೂರು ವೈದಿಕತ್ವದಲ್ಲಿ ಅ.17ರಿಂದ ಅ.27ರವರೆಗೆ ನಡೆಯಲಿದೆ.

17ರಂದು ದ್ವಾದಶ ನಾಳಿಕೇರ ಅಷ್ಟದ್ರವ್ಯದಿಂದ ಮಹಾಗಣಪತಿ ಹೋಮ, ಕೊಪ್ಪರಿಗೆ ಮುಹೂರ್ತ, 21ರಂದು ಲಲಿತಾ ಪಂಚಮಿ ಪೂಜೆ, 23ರಂದು ಸರಸ್ವತಿ ಹೋಮ, 25ರಂದು ಮಹಾನವಮಿ, ಆಯುಧ ಪೂಜೆ, ಮಧ್ಯಾಹ್ನ 2ರಿಂದ ಕಲಾಸಿಂಧು ವ್ಯಾಸರಾಜ ಭಟ್ ಆಲಂಕಾರು ಇವರಿಂದ ಭಕ್ತಿಗಾನ ಮಂಜರಿ ನಡೆಯಲಿದೆ. 17ರಿಂದ ಅ.26ರವರೆಗೆ ಗಣಹೋಮ, ಪಂಚಾಮೃತಾಭಿಷೇಕ, ಶರನ್ನವರಾತ್ರಿ ಪೂಜೆ, ಗೋನಿವಾಸ, ನಾಗದೇವರಿಗೆ ಅಭಿಷೇಕ, ಶ್ರೀ ಕುಂಭೇಶ್ವರಿ ಪೂಜೆ ನಡೆಯಲಿದೆ. 26ರಂದು ಗಣಪತಿ ಹೋಮ, ನವಗ್ರಹ ಶಾಂತಿ ಹವನ, ದತ್ತಯಾಗ, ಧನ್ವಂತರಿ ಹೋಮ, ಚಂಡಿಕಾ ಹೋಮ, ಮಾಣಿಲ ಶ್ರೀಗಳಿಂದ ಮಧುಕರಿ, ಸ್ವರ್ಣ ಮಂತ್ರಾಕ್ಷತೆ, ಮಹಾಪೂಜೆ, ದುರ್ಗಾಪೂಜೆ ದೀಪಾರಾಧನೆ, ಆಶ್ಲೇಷ ಬಲಿ, ದುರ್ಗಾಪೂಜೆ ಪುರಸ್ಸರ, ಅಷ್ಟಾವಧಾನ ಸೇವೆ, ಯಕ್ಷಗಾನ ನಡೆಯಲಿದೆ. 27ರಂದು ಸೀಯಾಳಾಭಿಷೇಕ ನಾಗತಂಬಿಲ ನಡೆಯಲಿದೆ.