ಕೆ.ಆರ್.ನಗರದ ಎಚ್.ಡಿ.ದೇವೇಗೌಡ ಸಮುದಾಯದ ಭವನದಲ್ಲಿ ಆಯೋಜಿಸಿದ್ದ 2024-25 ನೇ ಸಾಲಿನ ಸರ್ವಸದಸ್ಯರ ಮಹಾಸಭೆಯನ್ನು ಕೆ.ಎನ್.ಬಸಂತ್ ಉದ್ಘಾಟಿಸಿದರು. ಸರೋಜಾ ನಾರಾಯಣ್, ರಶ್ಮಿದಿನೇಶ್, ಕೇಶವ್, ವೈ.ಎಸ್.ಕುಮಾರ್, ವಿಜಯ್ ಕುಮಾರ್, ಎಂ.ಕೆ.ಮಹದೇವ್, ಅಪ್ಪರ್‌ಬಾಬು, ಎಸ್.ಮಹದೇವಯ್ಯ, ಎ.ಚಂದ್ರಶೇಖರ್, ಚಂದ್ರಕುಮಾರ್, ಸುರೇಶ್ ಇನ್ನಿತರರು ಇದ್ದರು. 
ಜಿಲ್ಲೆ

ನವನಗರ ಬ್ಯಾಂಕ್‌ಗೆ 5 ಕೋಟಿ ರೂ. ಲಾಭ

ಕೆ.ಆರ್.ನಗರ : 28 ವರ್ಷಗಳಿಂದ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 435 ಕೋಟಿ ರೂ. ವಹಿವಾಟು ನಡೆಸಿದ್ದು, 5 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.

ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯದ ಭವನದಲ್ಲಿ ಭಾನುವಾರ ನಡೆದ 2024-25 ನೇ ಸಾಲಿನ ಸರ್ವಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನಲ್ಲಿ 4,800 ಸದಸ್ಯರಿದ್ದು, 350 ಕೋಟಿ ರೂ. ಸಾಲ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ 475 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದ್ದು 6 ಕೋಟಿ ರೂ. ಲಾಭ ಗಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.

ಬ್ಯಾಂಕಿನಲ್ಲಿ ಸದಸ್ಯತ್ವ ಪಡೆದಿರುವ 4637 ಷೇರುದಾರ ಸದಸ್ಯರ ಪೈಕಿ ಹೊಸದಾಗಿ 277 ಜನ ಸದಸ್ಯತ್ವ ಪಡೆದಿದ್ದು ಈ ಪೈಕಿ 84 ಜನರು ಸದಸ್ಯತ್ವ ವಾಪಸ್ ಪಡೆದಿದ್ದಾರೆ. ಬ್ಯಾಂಕಿನಿಂದ ಫೋನ್‌ಪೇ, ಗೂಗಲ್ ಪೇ ಮತ್ತು ಎಟಿಎಂ ಸವಲತ್ತು ಕಲ್ಪಿಸಿದ್ದು ಇದರೊಂದಿಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಿರುವುದರಿಂದ ಸರ್ವರಿಗೂ ಅನುಕೂಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಷೇರು ಬಂಡವಾಳವನ್ನು ಹೆಚ್ಚಿಸಿ ಬ್ಯಾಂಕಿನ ವ್ಯಾಪ್ತಿಯ ಜನರಿಗೆ ಉತ್ತಮ ಸೇವೆ ನೀಡಲಾಗುವುದು ಎಂದು ಹೇಳಿದರು.

ಬ್ಯಾಂಕಿನ ಷೇರುದಾರ ಸದಸ್ಯರಾಗಿದ್ದು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಪ್ರಸ್ತುತ 10 ಸಾವಿರ ರೂ. ಮರಣ ನಿಧಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಸದಸ್ಯರಿಗೆ ಉಡುಗೊರೆ ಬದಲಿಗೆ ಶೇ.15 ರಷ್ಟು ಡಿವಿಡೆಂಡ್ ಪಾವತಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ಬ್ಯಾಂಕಿನ ಆಡಳಿತ ಕಚೇರಿ, ಕೆ.ಆರ್.ನಗರ ಶಾಖೆ, ಪಿರಿಯಾಪಟ್ಟಣ ಶಾಖೆಗಳು ಸ್ವಂತ ಕಟ್ಟಡ ಹೊಂದಿದ್ದು, ಮೈಸೂರಿನ ಹೂಟಗಳ್ಳಿ ಶಾಖೆಗೆ ನಿವೇಶನವನ್ನು ಖರೀದಿಸಿದ್ದು, ಮುಂದಿನ ವರ್ಷದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಮೈಸೂರು ನಗರದ ಗ್ರಾಹಕರಿಗೆ ಇನ್ನೂ ಉತ್ತಮ ಬ್ಯಾಂಕಿಂಗ್ ಸೇವೆಯನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸುರೇಶ್ 2025-26ನೇ ಸಾಲಿನ ಅಂದಾಜು ಆಯವ್ಯಯ ಮುಂಗಡ ಪ್ರಸ್ತಾವನೆ ಮಂಡಿಸಿ ಒಪ್ಪಿಗೆ ಪಡೆದರು. ಬ್ಯಾಂಕಿನ ಷೇರುದಾರ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷೆ ಸರೋಜಾ ನಾರಾಯಣ್, ನಿರ್ದೇಶಕರಾದ ರಶ್ಮಿದಿನೇಶ್, ಕೇಶವ್, ವೈ.ಎಸ್. ಕುಮಾರ್, ವಿಜಯ್ ಕುಮಾರ್, ಎಂ.ಕೆ.ಮಹದೇವ್, ಅಪ್ಪರ್‌ಬಾಬು, ಎಸ್.ಮಹದೇವಯ್ಯ, ಎ.ಚಂದ್ರಶೇಖರ್, ಚಂದ್ರಕುಮಾರ್, ಕೆ.ರಮೇಶ್ ರಾವ್, ಸುಬ್ಬನಾಯಕ, ವೃತ್ತಿಪರ ನಿರ್ದೇಶಕ ಮರಿಲಿಂಗಾಚಾರ್, ಚೇತನ್, ವ್ಯವಸ್ಥಾಪಕ ನಿರ್ದೇಶಕ ಸಿ ಸುರೇಶ್, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎನ್.ಎಸ್.ವಿಶ್ವನಾಥ್, ಎಚ್.ಟಿ. ಅನಂತರಾಮಯ್ಯ, ಆರ್.ಜೋಸೆಫ್, ಕೆ.ಆರ್.ನಗರ ಶಾಖಾ ವ್ಯವಸ್ಥಾಪಕ ಎಂ.ಪಿ.ಸುಹಾಸ್ ಗೌಡ ಸೇರಿದಂತೆ ಇನ್ನಿತರರು ಇದ್ದರು.