ಜಿಲ್ಲೆ

ಪಿಇಎಸ್ ಕಾಲೇಜಿನಲ್ಲಿ ನೇವಲ್ ವಿಂಗ್ ಕ್ಯಾಂಪ್: ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆ.1ರಿಂದ 10ರವರೆಗೆ ನೇವಲ್ ವಿಂಗ್ ಕೆಡೆಟ್‌ಗಳ ವಾರ್ಷಿಕ ಶಿಬಿರ ನಡೆಯುತ್ತಿದೆ. ಇದು ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡಿದ್ದು, 370ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಇದರಲ್ಲಿ 120 ವಿದ್ಯಾರ್ಥಿನಿಯರು ಸೇರಿದ್ದಾರೆ.
ತ್ರೀ ಕರ್ನಾಟಕ ನೌಕಾಘಟಕ ಮೈಸೂರು ಹಾಗೂ ಪಿಇಟಿ ಸಹಯೋಗದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಲೆಫ್ಟಿನೆಂಟ್ ಕಮಾಂಡರ್ ವಿನಯ್ ರಾಮಚಂದ್ರನ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಬೇತಿ ನೀಡಲಾಗುತ್ತಿದೆ.
ಇನ್ನು ಶಿಬಿರದಲ್ಲಿ ಎನ್‌ಸಿಸಿ ನೆವಲ್ ವಿಂಗ್‌ನ ಮೌಲ್ಯ, ರಕ್ತದಾನ ಶಿಬಿರ, ದೈಹಿಕ ಕಸರತ್ತು ಸೇರಿದಂತೆ ಹಲವು ವಿಭಿನ್ನ ಚಟುವಟಿಕೆ ಇರಲಿದೆ. ಇದಲ್ಲದೆ ಸಾಹಸಮಯ ಆಟೋಟಗಳನ್ನು ಆಯೋಜಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 5.30ರಿಂದ ಶಿಬಿರ ಆರಂಭವಾಗಲಿದ್ದು, ಇಡೀ ದಿನ ಶಿಸ್ತಿನ ಚಟುವಟಿಕೆ ನಡೆಯಲಿದೆ. 30ಕ್ಕೂ ಹೆಚ್ಚು ತರಬೇತುದಾರರಿದ್ದು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.
ಗುರುವಾರ ಶಿಬಿರ ಉದ್ಘಾಟಿಸಿದ ಪಿಇಟಿ ಕಾರ್ಯದರ್ಶಿ ಎಲ್.ಎಸ್.ಶಿವಪ್ರಸಾದ್, ಎನ್‌ಸಿಸಿ ಘಟಕ ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ಅಭಿವೃದ್ಧಿಗೊಳಿಸುತ್ತದೆ. ಮಾತ್ರವಲ್ಲದೆ ಧೈರ್ಯ, ಸಹಭಾವನೆ, ಶಿಸ್ತು, ನಾಯಕತ್ವ ಮತ್ತು ಜಾತ್ಯಾತೀತ ದೃಷ್ಠಿಕೋನ, ನಿಸ್ವಾರ್ಥ ಸೇವೆ, ಕ್ರೀಡಾ ಮನೋಭಾವ ಮತ್ತು ಕರ್ತವ್ಯಕ್ಕೆ ಅವಿರತ ಸಮರ್ಪಣಾ ಮನೋಭಾವವನ್ನು ಕಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆೆ. ವಿದ್ಯಾರ್ಥಿಗಳು ಇಂತಹ ಶಿಬಿರವನ್ನು ಸದುಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೆಫ್ಟಿನೆಂಟ್ ಕಮಾಂಡರ್ ವಿನಯ್ ರಾಮಚಂದ್ರನ್ ಮಾತನಾಡಿ, ಶಿಬಿರದಲ್ಲಿ ಎನ್‌ಸಿಸಿ ಕೆಡೆಟ್ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು, ಬೋಧಕರು, ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸುತ್ತಿದೆ. ಹತ್ತು ದಿನದವರೆಗೆ ವಸತಿ, ಪೆರೇಡ್ ಗ್ರೌಂಡ್, ತರಗತಿ ಕೊಠಡಿ ಹಾಗೂ ಹವಾನಿಯಂತ್ರಿತ ಅಡಿಟೋರಿಯಂ ವ್ಯವಸ್ಥೆ ಒದಗಿಸಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪಪ್ರಾಂಶುಪಾಲ ಎಸ್.ವಿನಯ್, ದೈಹಿಕ ಶಿಕ್ಷಣ ನಿರ್ದೇಶಕರಾದ ಅನಂತಪದ್ಮನಾಭ ಪ್ರಭು, ಆರ್.ವಿ.ವಿದ್ಯಾ ಇತರರಿದ್ದರು.

ನೇವಲ್ ವಿಂಗ್ ಕೆಡೆಟ್‌ಗಳ ವಾರ್ಷಿಕ ಶಿಬಿರ ಆಯೋಜಿಸಲು ನಮ್ಮ ಸಂಸ್ಥೆಗೆ ಅವಕಾಶ ಸಿಕ್ಕಿದೆ. ಶಿಬಿರಕ್ಕೆ ಅಗತ್ಯವಿರುವ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಮಾತ್ರವಲ್ಲದೆ ಮುಂದಿನ ದಿನದಲ್ಲಿ ನಮ್ಮ ಸಂಸ್ಥೆಯಲ್ಲಿಯೂ ಎನ್‌ಸಿಸಿ ನೇವಲ್ ವಿಂಗ್ ಅನ್ನು ಆರಂಭಿಸಲಾಗುತ್ತಿದೆ.ಕೆ.ಎಸ್.ವಿಜಯಾನಂದಪಿಇಟಿ ಅಧ್ಯಕ್ಷ