ಜಿಲ್ಲೆ

ದ್ವಿತೀಯ ಮಹಾಮಸ್ತಕಾಭಿಷೇಕಕ್ಕೆ ಸಜ್ಜಾದ ನವಗ್ರಹ ಕ್ಷೇತ್ರ

ಹುಬ್ಬಳ್ಳಿ : ಹನ್ನೆರೆಡು ದಿನಗಳ ಧಾರ್ವಿುಕ ಕಾರ್ಯಕ್ರಮಕ್ಕೆ ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರ ಸಂಪೂರ್ಣ ಸಜ್ಜಾಗಿದೆ.

61 ಅಡಿ ಎತ್ತರದ ಭಗವಾನ ಶ್ರೀ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹಾಮಹೋತ್ಸವ ಸಮಾರಂಭ ಜ. 15 ರಿಂದ 26ರವರೆಗೆ ನಡೆಯಲಿದೆ.

ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ನಡೆಯಲಿರುವ ಪಂಚಕಲ್ಯಾಣ ಹಾಗೂ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಗಣಧರಾಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು, ಆಚಾರ್ಯ ಶ್ರೀ ದೇವನಂದಿ ಮಹಾರಾಜರು, ಆಚಾರ್ಯ ಶ್ರೀ ಪದ್ಮನಂದಿ ಮಹಾರಾಜರು, ಆಚಾರ್ಯ ಶ್ರೀ ಸೂರ್ಯಸಾಗರ ಮಹಾರಾಜರು, ಆಚಾರ್ಯ ಶ್ರೀ ಗುಪ್ತಿನಂದಿ ಮಹಾರಾಜರು ಸೇರಿದಂತೆ ದೇಶದ ವಿವಿಧೆಡೆಯಿಂದ 15ಕ್ಕೂ ಹೆಚ್ಚು ಆಚಾರ್ಯರು ಈಗಾಗಲೇ ನವಗ್ರಹ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಪೇಜಾವರ ಶ್ರೀಗಳು, ಆದಿಚುಂಚನಗಿರಿ ಮಠದ ಸ್ವಾಮೀಜಿ ಸೇರಿದಂತೆ ಇತರ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ

ವರೂರು ನವಗ್ರಹ ಕ್ಷೇತ್ರದಲ್ಲಿ 12 ವರ್ಷಗಳ ನಂತರ ದ್ವಿತೀಯ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. 15ರಂದು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ ಅವರು ಪಂಚಕಲ್ಯಾಣ ಮಹಾಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಪಂಚಕಲ್ಯಾಣ ಮಹೋತ್ಸವದ ಯಜಮಾನರಾಗಿ ಅಮೆರಿಕ ಮೂಲದ ಜಿತೇಂದ್ರ ಕೊಟಾಡಿಯಾ ಅವರು ಧಾರ್ವಿುಕ ಕಾರ್ಯ ನಿರ್ವಹಿಸುವರು. ಪಂಚಕಲ್ಯಾಣ ಮಹೋತ್ಸವಕ್ಕಾಗಿ ಬೃಹತ್ ಪೆಂಡಾಲ್ ಹಾಕಿದ್ದು, ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ. ನಿತ್ಯ 40 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ದೇಶದ ವಿವಿಧ ಪ್ರದೇಶಗಳ ಜತೆಗೆ ವಿದೇಶಗಳಿಂದಲೂ ಜೈನ ಸಮಾಜದವರು ಪಂಚಕಲ್ಯಾಣ ಹಾಗೂ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ವಾಸ್ತವ್ಯ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಎಲ್ಲ ಸಮಾಜದ ಜನರಿಗೂ ಆಮಂತ್ರಣ ನೀಡಲಾಗಿದೆ.

ಜ.16ರಂದು ಭಗವಾನ ಪಾರ್ಶ್ವನಾಥ ತೀರ್ಥಂಕರ ಗರ್ಭಕಲ್ಯಾಣ ಮಹೋತ್ಸವ, 17ರಂದು ಭಗವಾನ ಪಾರ್ಶ್ವನಾಥರ ರಾಜ್ಯಾಭಿಷೇಕ, 19ರಂದು ಕೇವಲ ಜ್ಞಾನ, 20ರಂದು ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ. 20ರ ನಂತರ ನವಗ್ರಹದ ತೀರ್ಥಂಕರ ಮೂರ್ತಿಗಳಿಗೆ ನಿತ್ಯ ಅಭಿಷೇಕ ನಡೆಯಲಿದೆ. 21ರಂದು ನವಗ್ರಹ ಕ್ಷೇತ್ರದಲ್ಲಿನ 9 ತೀರ್ಥಂಕರರ ಮೂರ್ತಿಗಳಿಗೆ ಜನಸಾಮಾನ್ಯರಿಂದ ಜಲಾಭಿಷೇಕ ನಡೆಯಲಿದೆ. 22ರಂದು ಮೂರ್ತಿಗಳ ದಾನಿಗಳಿಂದ ಅಭಿಷೇಕ, 25ರಂದು ಇಂದ್ರ-ಇಂದ್ರಾಣಿಯರಿಂದ ಮಹಾಮಸ್ತಕಾಭಿಷೇಕ ಜರುಗಲಿದೆ. 22, 23 ಹಾಗೂ 24ರಂದು ಹೆಲಿಕಾಪ್ಟರ್​ನಿಂದ ನವಗ್ರಹ ತೀರ್ಥಂಕರರ ಮೇಲೆ ಪುಷ್ಪವೃಷ್ಟಿ ನೆರವೇರಲಿದೆ. 23ರಂದು ಮುಂಜಿ ಬಂಧನ, ಮಂತ್ರ ಸಂಸ್ಕಾರ ಹಾಗೂ ವೃತ ಸಂಸ್ಕಾರ ಆಯೋಜಿಸಲಾಗಿದೆ.

ಜ. 15ರಂದು ರಾಜ್ಯಪಾಲ ಥಾವರಚಂದ್ ಗೆಹಲೋತ್, 16ರಂದು ಉಪರಾಷ್ಟ್ರಪತಿ ಜಗದೀಪ ಧನಕರ, 20ರಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡರ, 21 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗಮಿಸಲಿದ್ದಾರೆ. 22ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮಂಗೇಶ ಭೇಂಡೆ, 23ಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿ. ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಕೇಂದ್ರ, ರಾಜ್ಯಗಳ ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳುವರು.

ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜ. 16ಕ್ಕೆ ರಮೇಶ ಅರವಿಂದ, 17ಕ್ಕೆ ವಿಜಯಪ್ರಕಾಶ , ಅನುರಾಧಾ ಭಟ್, 20ಕ್ಕೆ ಅರ್ಜುನ ಜನ್ಯ, ಅನುಶ್ರೀ, 22ರಂದು ರಾಜೇಶ ಕೃಷ್ಣ , 23ಕ್ಕೆ ಸಾಧುಕೋಕಿಲ, ರಘು ದೀಕ್ಷಿತ, 24ಕ್ಕೆ ತರುಣ, ರವಿಚಂದ್ರನ್ ಹಾಗೂ ಮತ್ತಿತರ ಕಲಾವಿದರು ಭಾಗವಹಿಸುವರು.