ಜಿಲ್ಲೆ

ಲೋಕಕಲ್ಯಾಣಕ್ಕಾಗಿ ನವಚಂಡಿಕಾ ಮಹಾಯಾಗ

ಮೈಸೂರು: ನಗರದ ಹೆಬ್ಬಾಳಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಲೋಕಕಲ್ಯಾಣಕ್ಕಾಗಿ ಬುಧವಾರ ನವಚಂಡಿಕಾ ಮಹಾಯಾಗ ಜರುಗಿತು.

ಶಾಖಾ ಮಠದ ನೂತನ ಕಟ್ಟಡದ 2ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಮಹಾಯಾಗದ ಸಾನ್ನಿಧ್ಯವನ್ನು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿದ್ದರು.

ಗುರುದೇವತಾ ಪ್ರಾರ್ಥನೆ, ಗಂಗಾಪೂಜೆ, ಮಹಾಗಣಪತಿ ಪೂಜೆ, ಮಹಾಸಂಕಲ್ಪ, ಕಳಸ ಸ್ಥಾಪನೆ, ಅಗ್ನಿಪ್ರತಿಷ್ಠೆ, ಮಹಾಗಣಪತಿ ಹೋಮ, ನವಗ್ರಹ ಹೋಮ ಮಂಗಳವಾರ ಜರುಗಿತು. ಬುಧವಾರ ಮುಂಜಾನೆಯಿಂದಲೇ ಮಹಾಗಣಪತಿ ಪ್ರಾರ್ಥನೆ, ದೇವಿಗೆ ಫಲಪಂಚಾಮೃತ ಅಭಿಷೇಕ, ಅಗ್ನಿಪ್ರತಿಷ್ಠೆ, ನವಚಂಡಿಕಾ ಮಹಾಯಾಗ ಶ್ರೀಮಹಾಲಕ್ಷ್ಮೀ ಲಕ್ಷ್ಮೀಕಾಂತ ಸ್ವಾಮಿಗೆ ಕಲಶಾಭಿಷೇಕ, ಅಷ್ಟಾವಧ್ವಾನಸೇವೆ, ಮಹಾಮಂಗಳಾರತಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಹೋಮಕ್ಕೆ ತನ್ನದೆ ಆದ ವಿಶೇಷತೆ ಇದೆ. ಸನಾತನ ಪ್ರಕ್ರಿಯೆಗಳಿಗೆ ಪೂರಕವಾಗಿ ಇಂದು ಹೋಮ, ಹವನಗಳು ನಡೆಯುತ್ತಿವೆ. ಮನಸು ಶುದ್ಧವಿದ್ದರೆ ದೈವದ ಕಡೆಗೆ ಹೋಗುತ್ತದೆ. ದೇವಿಯನ್ನು ಪೂಜಿಸುವುದರಿಂದ ಬಹಳ ಬೇಗ ದೈವತ್ವವನ್ನು ಪಡೆಯಬಹುದು ಎಂದು ತಿಳಿಸಿದರು.

ಪರಮಾತ್ಮನನ್ನು ತೋರಿಸುವ ಕೆಲಸವನ್ನು ತಾಯಿ ಮಾಡುತ್ತಾರೆ. ಅಮ್ಮನಿಗೆ ಹತ್ತಿರವಾಗಿರುವ ದೇವಿಯನ್ನು ಕುರಿತಾಗಿರುವ ಯಜ್ಞ ನಡೆದಿರುವುದರಿಂದ ಪರಮಾತ್ಮನನ್ನು ಕಾಣಲು ಸಾಧ್ಯ. ದೈವವನ್ನು ತೋರಿಸುವುದಕ್ಕೆ ಅಮ್ಮನೇ ಮಾರ್ಗ. ನಮ್ಮ ಒಂದು ಪರಂಪರೆಯಲ್ಲಿ ವ್ಯಕ್ತಿಯ ಬದುಕಿನ ಉದ್ದೇಶವೇನೆಂದರೆ ಮುಕ್ತಿಯನ್ನು ಪಡೆದುಕೊಳ್ಳುವುದು ಎಂದು ಹೇಳಿದರು.

ಮುಕ್ತಿಯನ್ನು ಪಡೆಯಲು ಜ್ಞಾನ ಮುಖ್ಯ. ಸ್ವಾರ್ಥರಹಿತವಾದ ನಿಸ್ವಾರ್ಥ ಸೇವೆ ಮುಕ್ತಿಯೆಡೆಗೆ ಪ್ರತಿಯೊಬ್ಬರನ್ನು ಕೊಂಡೊಯ್ಯುತ್ತದೆ. ಭಕ್ತಿಯಲ್ಲಿ ಮನಸ್ಸಿಗೆ ಆನಂದ ಸಿಗುತ್ತದೆ. ಆದ್ದರಿಂದ ಭಗವಂತ ನಾಡಿಗೆ, ನಾಡಿನ ಜನತೆಗೆ ಒಳ್ಳೆಯದು ಮಾಡಲಿ ಎಂದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ವಿವಿಧ ಶಾಖಾಮಠಗಳ ಸ್ವಾಮೀಜಿಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ಐಪಿಎಸ್ ಅಧಿಕಾರಿ ಡಾ. ಎ.ಎನ್.ಪ್ರಕಾಶ್‌ಗೌಡ, ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ, ಮಾಜಿ ಮೇಯರ್ ಮೋದಾಮಣಿ, ಬಿಜೆಪಿ ನಗರ ಉಪಾಧ್ಯಕ್ಷೆ ಹೇಮಾನಂದೀಶ್, ಮುಖಂಡರಾದ ಸುಬ್ರಹ್ಮಣ್ಯಂ, ಗಿರಿಧರ್ ಇತರರು ಇದ್ದರು. ತುಮಕೂರಿನ ವಿನೋದ್ ದೀಕ್ಷಿತ್ ಅವರಿಂದ ಪೂಜಾ ಕಾರ್ಯಕ್ರಮ ಜರುಗಿತು.