ಮಂಗಳೂರು: ಸಮಾಜದಲ್ಲಿ ಬಹಳ ಮಂದಿ ಶಿಕ್ಷಣ ವಂಚಿತರಿದ್ದಾರೆ. ಅವರಿಗಾಗಿಯೇ ನವಭಾರತ ರಾತ್ರಿ ಪ್ರೌಢಶಾಲೆ 81 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗುರುತಿಸಿಕೊಂಡಿದೆ ಎಂದು ನವಭಾರತ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಪಿ.ವಾಮನ ಶೆಣೈ ಹೇಳಿದರು.
ನವಭಾರತ ರಾತ್ರಿ ಪ್ರೌಢಶಾಲೆಯ 81ನೇ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿ.ಎ. ಫೌಂಡೆಶನ್ ಕೋರ್ಸನ್ನು ಅತ್ಯಂತ ಕಡಿಮೆ ಶುಲ್ಕ ಪಡೆದು ಪರಿಣಿತ ಶಿಕ್ಷಕರಿಂದ ಶಿಕ್ಷಣ ಒದಗಿಸುತ್ತಿದ್ದೇವೆ. ಎಲ್ಲರಿಗೂ ಸಿ ಎ ಶಿಕ್ಷಣ ಸಿಗಲೆಂಬುದೇ ನಮ್ಮ ಆಶಯ ಎಂದರು.
ಸ್ಯಾನ್ ಮಾರ್ಕೆಟಿಂಗ್‌ನ ಅಜಿತ್ ಕಿಣಿ ಅತಿಥಿಯಾಗಿದ್ದರು. ದಿನೇಶ್ ಕುಮಾರ್ ಬಿ. ವರದಿ ವಾಚಿಸಿದರು. ಫಕ್ರುದ್ದೀನ್ ಆಲಿ, ಜಯಧರ್, ಆನಂದ ಕೆ.ಎಂ., ರಾಮಚಂದ್ರ, ಬಸವರಾಜ್, ಬಾಲಕೃಷ್ಣ ಸುವರ್ಣ, ಸಂಸ್ಥೆಯ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ವೈಭವ ಹಾಗೂ ನವ ಭಾರತ ಯಕ್ಷಗಾನ ಅಕಾಡೆಮಿಯ ಸದಸ್ಯರಿಂದ ‘ವೀರ ವೀರೇಶ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.