ಜಿಲ್ಲೆ

ಉಪಕಸುಬುಗಳಿಂದ ಆರ್ಥಿಕ ಸ್ವಾವಲಂಬನೆ, ಜಿಪಂ ಅಧ್ಯಕ್ಷ ಪ್ರಸಾದ್ ಅಭಿಮತ, ಹೊಸಕೋಟೆಯಲ್ಲಿ ನಾಟಿ ಕೋಳಿಮರಿ ವಿತರಣೆ

Bengaluru Rural

ಬೆಂಗಳೂರು ಗ್ರಾಮಾಂತರ: ಕೃಷಿ ಚಟುವಟಿಕೆಯೊಂದಿಗೆ ರೈತರು ಹೈನುಗಾರಿಕೆ, ಕುರಿ, ಮೇಕೆ ಸಾಕಣೆ ಜತೆಗೆ ಕೋಳಿ ಸಾಕಣೆಯಂತಹ ಉಪಕಸುಬುಗಳ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಜಿಪಂ ಅಧ್ಯಕ್ಷ ವಿ.ಪ್ರಸಾದ್ ಹೇಳಿದರು.

ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪಶುಪಾಲನಾ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನಾಟಿ ಕೋಳಿ ಮರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರ ಆರ್ಥಿಕ ಸ್ವಾವಲಂಬನೆಗಾಗಿ ಅನೇಕ ಕಾರ್ಯಕ್ರಮ ಜಾರಿಯಲ್ಲಿವೆ. ಅವುಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನಾಟಿ ಕೋಳಿ ಮಾಂಸ ಪೌಷ್ಟಿಕಾಂಶ ಆಹಾರವಾಗಿರುವುದರಿಂದ ಹೆಚ್ಚಿನ ಬೇಡಿಕೆ ಬಂದಿದೆ. ಕರೊನಾ ಲಾಕ್‌ಡೌನ್ ತೆರವು ಬಳಿಕ ಬಹಳಷ್ಟು ನಿರುದ್ಯೋಗ ಯುವಕರು ಕುರಿ ಮೇಕೆ ಸಾಕಣೆ ಕೋಳಿ ಸಾಕಣೆಯಂತಹ ಉದ್ಯಮದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ಕಂಡುಕೊಳ್ಳುತ್ತಿದ್ದಾರೆ ಎಂದರು.

ಮಳೆಯಾಶ್ರಿತ ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದೆ. ಇದರೊಂದಿಗೆ ಹೈನೋದ್ಯಮವೂ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ನಾಟಿ ಕೋಳಿ ಸಾಕಣೆ ಉದ್ಯಮವು ಮುಂಚೂಣಿಗೆ ಬಂದಿರುವುದು ಉತ್ತಮ ಬೆಳವಣಿಗೆ. ಪಶುಪಾಲನೆ ಇಲಾಖೆ ಅಧಿಕಾರಿಗಳು ಫಲಾನುಭವಿಗಳನ್ನು ಆಯ್ಕೆ ಮಾಡಿ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಿ ಉದ್ಯಮವನ್ನು ಉತ್ತೇಜಿಸಬೇಕು ಎಂದು ಸೂಚಿಸಿದರು.