ಮಂಗಳೂರು: ಭರತನಾಟ್ಯದಂತಹ ನೃತ್ಯ ಕಲೆ ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ನೆಮ್ಮದಿಯನ್ನು ಒದಗಿಸುತ್ತವೆ ಎಂದು ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಕೆ ರಾವ್ ಅಭಿಪ್ರಾಯ ಪಟ್ಟರು.
ಮಂಗಳೂರಿನ ನಾಟ್ಯಾರಾಧನಾ ಕಲಾಕೇಂದ್ರದ 30ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯಾಮೃತ ಸರಣಿ ಕಾರ್ಯಕ್ರಮಗಳ ಅಂಗವಾಗಿ ಕೆನರಾ ಶಾಲಾ ಸಭಾಭವನದಲ್ಲಿ ನಡೆದ ನೃತ್ಯ ಚಿಗುರು 10 ವರುಷಗಳ ಒಳಗಿನ ಪುಟಾಣಿ ಪ್ರತಿಭೆಗಳ ಏಕವ್ಯಕ್ತಿ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ನಿರ್ದೇಶಕಿ, ಗುರು ಸುಮಂಗಲಾ ರತ್ನಾಕರ್ ರಾವ್ ಅವರ ನೃತ್ಯ ಕಲೆಯಲ್ಲಿನ ಪರಿಶ್ರಮ ಮತ್ತು ಸಂಸ್ಥೆಯ ತ್ರಿಂಶೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ನೃತ್ಯ ವಿದ್ಯಾಲಯ ಕದ್ರಿಯ ನಿರ್ದೇಶಕ ಯು.ಕೆ.ಪ್ರವೀಣ್, ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿಯ ಅಧ್ಯಕ್ಷ ರಮಾನಂದ ಪಾಂಗಳ್, ಕಲಾಪೋಷಕಿ ಕೇಸರಿ ಪೂಂಜ, ಸನಾತನ ನಾಟ್ಯಾಲಯದ ಗುರು ಶಾರದಾಮಣಿ ಶೇಖರ್, ಕಲಾಸಿರಿ ಸಂಗೀತ ಮತ್ತು ನೃತ್ಯ ಅಕಾಡೆಮಿಯ ನಿರ್ದೇಶಕಿ ಮಯೂರಿ ಎಸ್ ಕಾವೂರು, ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ಮೈತ್ರಿ ಭಟ್ ಮವ್ವಾರ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು.
ಪುಟಾಣಿಗಳಾದ ಭಾವಿಕಾ ಮಯ್ಯ ( ಗುರು ಸುಮಂಗಲಾ ರತ್ನಾಕರ ರಾವ್ ಶಿಷ್ಯೆ) ,ಮನಸ್ವಿ ಉಪ್ಪಿನೆ ( ಗುರು ಸ್ವಾತಿ ಭಟ್ ಶಿಷ್ಯೆ), ತೃಪ್ತಿ ಸುವರ್ಣ (ಗುರು ಡಾ. ಶ್ರೀವಿದ್ಯಾ ಮುರಳೀಧರ್ ಶಿಷ್ಯೆ), ಅದ್ವಿಕಾ ಭಟ್ ( ವಿದ್ಯಾಶ್ರೀ ರಾಧಾಕೃಷ್ಣ ಶಿಷ್ಯೆ), ಸಾಕ್ಷಿ ಆಚಾರ್ಯ (ಗುರು ಭಾರತಿ ಸುರೇಶ್ ಶಿಷ್ಯೆ), ರಿದ್ಧಿ ಎಚ್.ಶೆಟ್ಟಿ ( ಅನ್ನಪೂರ್ಣ ರಿತೇಶ್ ಶಿಷ್ಯೆ), ಮಾತಂಗಿ ( ದೀಪಕ್ ಕುಮಾರ್ ಮತ್ತು ಪ್ರೀತಿಕಲಾ ದೀಪಕ್ ಶಿಷ್ಯೆ) ಮತ್ತು ವಿಶೇಷ ಆಹ್ವಾನಿತ ಬಾಲ ಪ್ರತಿಭೆ ಮಾಷ್ಟರ್ ಶಮಂತಕ ನಂಬೂದರಿ ಧಾರವಾಡ (ಗುರು ಅತುಲ್ ಬಾಲು ಚೆನ್ನೈ ಶಿಷ್ಯ) ಪ್ರಸ್ತುತ ಪಡಿಸಿದ ನೃತ್ಯಗಳು ಜನಮನ ಗೆದ್ದವು.
ಗುರು ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿದರು, ಡಾ.ಚೈತ್ರಶ್ರೀ ಗುರುರಾಜ್ ವಂದಿಸಿದರು, ಧರಿತ್ರಿ ಭಿಡೆ ಕಾರ್ಯಕ್ರಮ ನಿರೂಪಿಸಿದರು. ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಗಣೇಶ್ ಅಮೀನ್ ಸಂಕಮಾರ್, ಟ್ರಷ್ಠಿ ಬಿ.ರತ್ನಾಕರ ರಾವ್, ಸಂಘಟನಾ ಕಾರ್ಯದರ್ಶಿ ಶಶಿರಾಜ ರಾವ್ ಕಾವೂರು, ಉಪಾಧ್ಯಕ್ಷರಾದ ಬೈಕಾಡಿ ಶ್ರೀನಿವಾಸ ರಾವ್, ಸುಧಾಕರ ರಾವ್ ಪೇಜಾವರ್ ಉಪಸ್ಥಿತರಿದ್ದರು.