ಜಿಲ್ಲೆ

ಮನೆಯ ಕಸ ತಂದು ರಸ್ತೆಗೆ ಎಸೆಯಬೇಡಿ...

ಪ್ರಶಾಂತ ಜಿ. ಭಾಗ್ವತ

ತೆಂಕನಿಡಿಯೂರು ಪಿಡಿಒ ದಯಾನಂದ್​ ಸಲಹೆ

ಮಲ್ಪೆಯಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ರಸ್ತೆ ಬದಿಯಲ್ಲಿ ಅನೇಕರು ತ್ಯಾಜ್ಯ ಎಸೆಯುತ್ತಿದ್ದು ವಿವಿಧ ಮಾರ್ಗಗಳಲ್ಲಿ ಕಸದ ರಾಶಿಯಿಂದಾಗಿ ಪರಿಸರ ಹದಗೆಡುತ್ತಿದೆ. ಮನೆಯ ಕಸವನ್ನು ರಸ್ತೆಗೆ ಎಸೆಯದೆ ಅದನ್ನು ಕಾಂಪೋಸ್ಟ್​ ಗೊಬ್ಬರವಾಗಿಸಿ ಉಪಯೋಗಿಸುವುದರಿಂದ ತೋಟದ ಫಲವತ್ತತೆ ಹೆಚ್ಚಿಸಬಹುದು. ಈ ಕ್ರಮದಿಂದ ಪರಿಸರ ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳಬಹುದು ಎಂದು ತೆಂಕನಿಡಿಯೂರು ಗ್ರಾಪಂನ ಅಭಿವೃದ್ಧಿ ಅಧಿಕಾರಿ ದಯಾನಂದ್​ ತಿಳಿಸಿದರು.

ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ಚರ್ಚ್​ನ ಸಭಾಂಗಣದಲ್ಲಿ ಚರ್ಚ್​ನ ಪರಿಸರ ಆಯೋಗ, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂ, ತೆಂಕನಿಡಿಯೂರು ಮತ್ತು ಬಡಾನಿಡಿಯೂರು ಗ್ರಾಪಂ ಸಹಕಾರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಕೃತಿ-ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹವಾಮಾನ ವೈಪರೀತ್ಯ

ಚರ್ಚ್​ನ ಧರ್ಮಗುರು ವಂ.ಡೆನಿಸ್​ ಡೆಸಾ ಮಾತನಾಡಿ, ಪರಿಸರ ಅಸಮತೋಲನದಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಈಗಿನಿಂದಲೇ ಎಚ್ಚೆತ್ತುಕೊಂಡು ಪರಿಸರ ರಕ್ಷಣೆಗೆ ಹೆಚ್ಚಿನ ಮಹತ್ವ ಕೊಡಬೇಕಿದೆ. ಎಲ್ಲ ಜೀವರಾಶಿಗಾಗಿ ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು ಎಂದೆಂದಿಗೂ ಉಳಿಯಬೇಕು. ಪ್ರಕೃತಿದತ್ತ ಈ ಕೊಡುಗೆಯ ಮೇಲೆ ಎಲ್ಲರೂ ಅವಲಂಬಿತರಾಗಿದ್ದು, ಪರಿಸರ ಸಂರಕ್ಷಣೆ ಆಗಲೇಬೇಕಿದೆ ಎಂದರು.

ಸನ್ಮಾನ, ಉಪನ್ಯಾಸ

ಪ್ರಾಧ್ಯಾಪಕ ಸ್ಟೀವನ್​ ಕ್ವಾಡ್ರಸ್​ ಪೆರ್ಮುದೆ ಪರಿಸರ ನಾಶದಿಂದ ಆಗುವ ದುಷ್ಪರಿಣಾಮ ಕುರಿತು ಉಪನ್ಯಾಸ ನೀಡಿದರು. ತೆಂಕನಿಡಿಯೂರು ಮತ್ತು ಬಡಾನಿಡಿಯೂರು ಗ್ರಾಪಂ ವ್ಯಾಪ್ತಿಯ ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಶೋಭಾ ಡಿ. ನಾಯ್ಕ್​, ಬಡಾನಿಡಿಯೂರು ಗ್ರಾಪಂ ಅಧ್ಯಕ್ಷೆ ಯಶೋದಾ ಆಚಾರ್ಯ, ಕಾರ್ಯದರ್ಶಿ ಗುರುರಾಜ್​, ಚರ್ಚ್​ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್​ ಫೆರ್ನಾಂಡಿಸ್​, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್​, ಕಾನ್ವೆಂಟ್​ನ ಮುಖ್ಯಸ್ಥರಾದ ಸಿಸ್ಟರ್​ ಸುಶ್ಮಾ, ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿ ತೊಟ್ಟಂ ಉಪಾಧ್ಯಕ್ಷ ಶಬೀರ್​ ಸಾಹೇಬ್​, ಮುಖಂಡರಾದ ಪ್ರಖ್ಯಾತ್​ ಶೆಟ್ಟಿ, ಶರತ್​ ಶೆಟ್ಟಿ, ಮೀನಾ ಪಿಂಟೊ, ಯಾದವ ಇತರರಿದ್ದರು.

ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿ ತೊಟ್ಟಂ ಕಾರ್ಯದರ್ಶಿ ಲೆಸ್ಲಿ ಆರೋಜಾ ಸ್ವಾಗತಿಸಿದರು. ಪರಿಸರ ಆಯೋಗದ ಸಂಚಾಲಕ ಜೊಸೆಫ್​ ಪಿಂಟೊ ವಂದಿಸಿದರು. ಲವೀನಾ ಎ. ಫೆರ್ನಾಂಡಿಸ್​ ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳಲ್ಲಿ ಜಾಗೃತಿ ಮೂಡಿಸಿ

ಸಮನ್ವಯ ಸರ್ವ ಧರ್ಮ ಸೌಹಾರ್ದ ಸಮಿತಿಯ ಅಧ್ಯಕ್ಷ ರಮೇಶ್​ ತಿಂಗಳಾಯ ಮಾತನಾಡಿ, ಮಕ್ಕಳಲ್ಲಿ ಪರಿಸರದ ಜಾಗೃತಿ ಮೂಡಿಸುವ ಅಗತ್ಯತೆ ಇಂದು ಹೆಚ್ಚಿದೆ. ಪರಿಸರಕ್ಕೆ ಕಾಡುತ್ತಿರುವ ಕಸದ ಸಮಸ್ಯೆ ನೀಗಿಸಲು ವ್ಯಾಪ್ತಿಯ ಗ್ರಾಪಂಗಳು ಸೂಕ್ತ ನಿರ್ವಹಣೆಯತ್ತ ಗಮನ ಹರಿಸಬೇಕು. ಜನರೂ ಸಹ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು ಎಂದರು.

ಜನರು ಪರಿಸರದ ಕಾಳಜಿ ತೋರದಿದ್ದರೆ ಮುಂದೊಂದು ದಿನ ಸಮಸ್ತ ಜೀವಸಂಕುಲಕ್ಕೇ ಆಪತ್ತು ಎದುರಾಗುವ ಸಾಧ್ಯತೆ ಇದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಗಿಡ-ಮರ ಬೆಳೆಸಬೇಕು. ಅದರಿಂದ ತಾಪಮಾನ ತಗ್ಗಲು ಸಾಧ್ಯವಿದೆ. | ದಯಾನಂದ್​. ತೆಂಕನಿಡಿಯೂರು ಗ್ರಾಪಂ ಪಿಡಿಒ